ADVERTISEMENT

ಆಲಮಟ್ಟಿ: ಚುನಾವಣಾ ಅಕ್ರಮ ತಡೆಗೆ ಕಠಿಣ ಕ್ರಮ

ಪೊಲೀಸ್ ಅಧಿಕಾರಿಗಳಿಗೆ ಕಡಕ್ ಐಜಿಪಿ ಎನ್. ಸತೀಶಕುಮಾರ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 15:32 IST
Last Updated 23 ಮಾರ್ಚ್ 2023, 15:32 IST
ಆಲಮಟ್ಟಿಯ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ನಡೆದ ಅವಳಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬೆಳಗಾವಿ ಉತ್ತರ ವಲಯದ ಐಜಿಪಿ ಎನ್. ಸತೀಶಕುಮಾರ ಮಾತನಾಡಿದರು.
ಆಲಮಟ್ಟಿಯ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ನಡೆದ ಅವಳಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಬೆಳಗಾವಿ ಉತ್ತರ ವಲಯದ ಐಜಿಪಿ ಎನ್. ಸತೀಶಕುಮಾರ ಮಾತನಾಡಿದರು.   

ಆಲಮಟ್ಟಿ: ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಚುನಾವಣಾ ಅಕ್ರಮ ತಡೆಗಟ್ಟಲು ತಕ್ಷಣವೇ 46 ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗುವುದು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಎನ್. ಸತೀಶಕುಮಾರ ಹೇಳಿದರು.

ಆಲಮಟ್ಟಿಯ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಮಹಾರಾಷ್ಟ್ರ ಗಡಿ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಮೇಲಿಂದ ಮೇಲೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಕಾರ್ಯವೈಕರಿ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.

ADVERTISEMENT

ಚುನಾವಣೆ ಘೋಷಣೆಯಾದ ಮೇಲೆ ಚೆಕ್ ಪೋಸ್ಟ್ ಸಂಖ್ಯೆ ಹೆಚ್ಚಿಸಲಾಗುವುದು, ಚುನಾವಣಾ ಘೋಷಣೆಗೂ ಮುನ್ನವೇ ನಾನಾ ಕಡೆ ಅಕ್ರಮ, ನಾನಾ ವಸ್ತುಗಳ ಹಂಚಿಕೆ ಹಾಗೂ ಸಂಗ್ರಹವನ್ನು ಪತ್ತೆಹಚ್ಚಿ ಪ್ರಕರಣ ಕಡ್ಡಾಯವಾಗಿ ದಾಖಲಿಸಲು ಸೂಚಿಸಲಾಗಿದೆ ಎಂದರು.

ಪ್ರತಿಯೊಬ್ಬ ಪೊಲೀಸ್‌ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಬಗ್ಗೆ, ಪೊಲೀಸ್ ಮಾದರಿ ನಡತೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಮಾದರಿ ಚುನಾವಣಾ ನೀತಿಯನ್ನು ಜಾರಿಗೊಳಿಸಲು ಸೂಚಿಸಲಾಗಿದೆ.‌ ಮುಂದಿನ ಎರಡು ತಿಂಗಳು ಹೆಚ್ಚು ಜವಾಬ್ದಾರಿಯುತವಾಗಿ, ದಕ್ಷತೆಯಿಂದ, ಹೆಚ್ಚಿನ ಅವಧಿ ಕಾರ್ಯನಿರ್ವಹಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯ ಸಂಗ್ರಹಣೆ ಬಗ್ಗೆ ಮಾಹಿತಿ ಸಂಗ್ರಹಿಸಿ, ಅದನ್ನು ಪತ್ತೆ ಹಚ್ಚಲು ತಿಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಅಪರಾಧ ಪ್ರಕರಣ, ಜೂಜಾಟ ಹೆಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಇಂದಿನ ಸಭೆಯಲ್ಲಿ ಜಿಲ್ಲಾ ಎಸ್ ಪಿ ಅವರಿಗೆ ಈ ಬಗ್ಗೆ ಕಡಕ್ ಸೂಚನೆ ನೀಡಲಾಗಿದೆ ಎಂದರು.

ಹೆಚ್ಚಿದ ಜೂಜಾಟ: ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಅಕ್ರಮ ಜೂಜಾಟ ನಡೆಯುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಮುಂದಿನ ಕೆಲ ದಿನಗಳಲ್ಲಿಯೇ ಮಟ್ಟಹಾಕಲಾಗುವುದು ಎಂದರು.

ಸಭೆ: ಸುಮಾರು ಎರಡು ಗಂಟೆಗಳ ಕಾಲ ಅವಳಿ ಜಿಲ್ಲೆಯ ಎಲ್ಲಾ ಠಾಣಾಧಿಕಾರಿಗಳ, ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಐಜಿಪಿ, ಮಾದರಿ ಚುನಾವಣಾ ನೀತಿ ಸಂಹಿತೆ, ಅದರ ಅನುಷ್ಟಾನ ಕುರಿತು ತಿಳಿಸಿದರು.

ಚುನಾವಣಾ ಅಕ್ರಮ ತಡೆಗಟ್ಟಲು ಪಕ್ಷಾತೀತವಾಗಿ ಕಾರ್ಯನಿರ್ವಹಿಸಲು ಕಡಕ್ ಸೂಚನೆ ನೀಡಿದರು.

ಪ್ರತಿ ತಾಲ್ಲೂಕಿನ ಪೊಲೀಸ್ ಅಧಿಕಾರಿಗಳಿಂದ ಅಪರಾಧ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಪಡೆದು, ಹಲವು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಜಯಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ, ಬಾಗಲಕೋಟೆ ಎಸ್.ಪಿ. ಜಯಪ್ರಕಾಶ, ಹೆಚ್ಚುವರಿ ಎಸ್. ಪಿ. ಶಂಕರಗೌಡ ಮಾರಿಹಾಳ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.