
ವಿಜಯಪುರ: ‘ನಮ್ಮ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಜ್ಞಾನ ಸಂಪನ್ನರಾಗಿ ಹೊರಬರುವ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗದೇ ನಮ್ಮ ದೇಶದಲ್ಲಿಯೇ ನೆಲೆ ನಿಂತು ಬಡತನ ನಿವಾರಣೆಯಂತಹ ಮಹೋನ್ನತ ಕಾರ್ಯಕ್ಕೆ ಮುಂದಾಗಬೇಕು’ ಎಂದು ಕಲಬುರ್ಗಿ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಕರೆ ನೀಡಿದರು.
ವಿಜಯಪುರದ ಕಿತ್ತೂರ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 45ನೇ ಪ್ರಾಂತ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಶಿಕ್ಷಣ ಪಡೆದು ಅನೇಕರು ವಿದೇಶಗಳಿಗೆ ಹೋಗುತ್ತಾರೆ, ಆ ದೇಶಗಳು ನಮ್ಮ ಪ್ರತಿಭಾನ್ವಿತರ ಪ್ರತಿಭೆಯನ್ನೇ ಬಳಸಿಕೊಂಡು ಸಂಪದ್ಭರಿತವಾಗುತ್ತಿವೆ, ಹೀಗಾಗಿ ಈ ಪ್ರತಿಭೆಗಳು ಇಲ್ಲಿಯೇ ನೆಲೆ ನಿಂತು ಬಡತನ, ನಿರುದ್ಯೋಗ ನಿವಾರಣೆಯಂತಹ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಕೈ ಜೋಡಿಸಬೇಕು’ ಎಂದರು.
ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅಶೀಷ್ ಚವ್ಹಾಣ ಮಾತನಾಡಿ, ‘ಕಿತ್ತೂರ ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ ದೇವಿಯ ಶೌರ್ಯ, ಸಾಹಸ, ದೇಶಾಭಿಮಾನವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ದರ್ಶನ್ ಹೆಗಡೆ ಮಾತನಾಡಿದರು. ಸಮಾಜ ಸೇವಕ ಹಾಗೂ ಪ್ರಾಂತ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ವಿಕಾಸ ದರಬಾರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಉದ್ಯಮಿ ರಾಜು ಬಿಜ್ಜರಗಿ, ಎಬಿವಿಪಿ ಬಳ್ಳಾರಿ ವಿಭಾಗದ ಪ್ರಮುಖರಾದ ಸುಮಂಗಲಾ ಆಡ್ಯಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಪ್ರೊ.ಶೀಲಾ ಬಿರಾದಾರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ, ಉದ್ಯಮಿ ಶಾಂತೇಶ ಕಳಸಗೊಂಡ ಇದ್ದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇವಲ ರಾಜಕೀಯ ಕಾರಣಕ್ಕೆ ಕೆಲ ರಾಜ್ಯ ಸರ್ಕಾರಗಳು ವಿರೋಧಿಸಿ ಪರ್ಯಾಯ ಶಿಕ್ಷಣ ನೀತಿ ರೂಪಿಸಲು ಹೊರಟಿರುವುದು ಸರಿಯಲ್ಲ ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯ ವಿಚಾರಗಳು ಇರಲೇಬೇಕು ಬಸವರಾಜ ಕುಬಕಡ್ಡಿ, ರಾಜ್ಯ ಘಟಕದ ಅಧ್ಯಕ್ಷ ಎಬಿವಿಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.