ನಾಲತವಾಡ: ‘ಪ್ರತಿಯೊಬ್ಬ ವಿದ್ಯಾರ್ಥಿ ಮನಸ್ಸು ಕೊಟ್ಟು ಓದುವುದನ್ನು ರೂಢಿಸಿಕೊಳ್ಳಬೇಕು. ಓದಿದ, ಕೇಳಿದ ಪ್ರತಿ ವಿಷಯವೂ ಮನಸ್ಸಿನೊಳಗೆ ನುಗ್ಗಿ, ಶಾಶ್ವತವಾಗಿ ನೆಲೆ ನಿಲ್ಲುವಂತೆ ಅಧ್ಯಯನ ಮಾಡಬೇಕು. ಇದು ಗುರಿಸಾಧನೆಗೆ ಯಶಸ್ಸಿನ ಮೆಟ್ಟಿಲು ಏರಲು ನೆರವಾಗುತ್ತದೆ’ ಎಂದು ಶಿಕ್ಷಣ ತಜ್ಞ ನಾ.ಸೋಮೇಶ್ವರ ಹೇಳಿದರು.
ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸೈನ್ಸ್ ಪಿಯು ಕಾಲೇಜು, ನೀಟ್ ಆಕಾಡೆಮಿಯ ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ವಿದ್ಯಾರ್ಥಿ-ಪರೀಕ್ಷೆ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಜ್ಞಾನವು ಕೇವಲ ಪ್ರಯೋಗಾಲಯಗಳಲ್ಲಿ ಇಲ್ಲ. ಅದು ಪ್ರತಿ ವಿದ್ಯಾರ್ಥಿಯ ಉಸಿರಿನಲ್ಲಿ, ಆಹಾರದಲ್ಲಿ, ಮನಸ್ಸಿನಲ್ಲಿ ಇದೆ. ನಿಮ್ಮ ಭಾಷೆಯಲ್ಲಿಯೇ ಅದನ್ನು ಕಲಿಯಬೇಕು. ಪ್ರತಿದಿನವೂ ವಿಜ್ಞಾನವನ್ನು ಆನಂದಿಸಬೇಕು. ಓದುವುದೂ, ಓದಿದ್ದನ್ನು ನೆನಪಲ್ಲಿಟ್ಟುಕೊಳ್ಳುವುದು ಒಂದು ಕಲೆ. ಸಾಧಿಸಬೇಕು ಎನ್ನುವ ಗುರಿ ಇದ್ದರೆ ವಿದ್ಯೆ ತಾನಾಗಿಯೇ ಒಲಿಯುತ್ತದೆ. ಗುರಿ ಸಾಧನೆಯತ್ತ ಮುನ್ನುಗ್ಗುವುದೇ ವಿದ್ಯಾರ್ಥಿ ಜೀವನದ ಗುರಿಯಾಗಿರಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಅಮಿತ್‌ಗೌಡ ಪಾಟೀಲ ಮಾತನಾಡಿ, ‘ಆಕ್ಸಫರ್ಡ್ ನೀಟ್ ವಿಭಾಗದಿಂದ ಪ್ರತಿ ವರ್ಷ 180ರವರೆಗೆ ವಿದ್ಯಾರ್ಥಿಗಳು ಎಂಬಿಬಿಎಸ್‌ಗೆ ಆಯ್ಕೆಯಾಗುತ್ತಾರೆ. ಇದು ಉತ್ತರಕರ್ನಾಟಕದಲ್ಲೇ ಅತಿ ಹೆಚ್ಚು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಈ ಸಾಧನೆಗೆ ನಮ್ಮಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ, ತರಬೇತಿ, ಸ್ಮಾರ್ಟ್‌ಕ್ಲಾಸ್ ತಂತ್ರಜ್ಞಾನ, ಉಪನ್ಯಾಸಕರ ಅರ್ಪಣಾ ಮನೋಭಾವ, ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಕಾರಣ’ ಎಂದರು.
ರಾಯಚೂರು ಜಿಲ್ಲೆ ಗಬ್ಬೂರಿನ ಕೋಚಿಂಗ್ ಕೇಂದ್ರದ ಮುಖ್ಯಸ್ಥ ಚನ್ನಪ್ಪ ಬೂದಿಹಾಳ, ಕಲಬುರ್ಗಿಯ ನಿವೃತ್ತ ಮುಖ್ಯಾಧ್ಯಾಪಕ ಎಸ್.ಎಸ್. ಹಿರೇಮಠ ಮಾತನಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕ ಮೌನೇಶ ಶಹಾಪುರ ಕಾರ್ಯಕ್ರಮ ನಿರ್ವಹಿಸಿದರು. ಎಸ್ಸೆಸ್ಸೆಲ್ಸಿ, ಪಿಯು ವಿಭಾಗದ ಅಂದಾಜು 3,000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಅಂದಾಜು ಎರಡು ಗಂಟೆಗಳ ಕಾಲ ಸೋಮೇಶ್ವರ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ, ಸಂಶಯಗಳಿಗೆ ಸಮಾಧಾನಕರ ಉತ್ತರ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.