ದೇವರಹಿಪ್ಪರಗಿ: ನಿವೃತ್ತಿಯಾದರೆ ಸಾಕು, ಉಳಿದ ಕಾಲವನ್ನು ಆರಾಮವಾಗಿ ಮನೆಯಲ್ಲಿ ಕುಳಿತು ಕಳೆಯುವವರೇ ಹೆಚ್ಚು. ಇಲ್ಲೊಬ್ಬರು ನಿವೃತ್ತಿಯ ನಂತರ ಕೃಷಿಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಮಾದರಿಯಾಗಿದ್ದಾರೆ.
ತಾಲ್ಲೂಕಿನ ನಿವಾಳಖೇಡ ಗ್ರಾಮದ ನಿವಾಸಿ ಚನ್ನಪ್ಪ ಕಾರಜೋಳ ದೂರಸಂಪರ್ಕ ಇಲಾಖೆಯಿಂದ (ಬಿಎಸ್ಎನ್ಎಲ್) ನಿವೃತ್ತಿಯಾದ ನಂತರ ಐದು ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆಯುವದರ ಮೂಲಕ ಲಾಭ ಗಳಿಸುತ್ತಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಿರುವ 9 ಎಕರೆ ಮರಡಿ ಜಮೀನನ್ನು ರೈತ ಚನ್ನಪ್ಪ ಕೊಂಡಾಗ ಅದು ಕಲ್ಲಿನ ಮರಡು ಭೂಮಿ. ಅಲ್ಲಿ ಬೆಳೆ ಬೆಳೆಯುವುದೇ ಅಸಾಧ್ಯ ಎನ್ನುವಂತಿತ್ತು. ಆದರೆ 2019ರಲ್ಲಿ ನಿವೃತ್ತಿಯ ನಂತರ ಕೃಷಿಯ ನಂಟು ಬೆಳೆಸಿಕೊಂಡು, ಪ್ರತಿ ವರ್ಷ ಭೂಮಿಯನ್ನು ಒಂದಿಷ್ಟು ಸುಧಾರಣೆ ಮಾಡುತ್ತಾ ಬೆಳೆ ಬೆಳೆಯಬಹುದದ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ.
ತಮ್ಮ ಜಮೀನಿನಲ್ಲಿ ಇರುವ ಒಂದು ಭಾವಿ ಹಾಗೂ ಸಮೀಪದ ಕಾಲುವೆ ನೀರಿನ ಸಹಾಯದಿಂದ 4 ಎಕರೆಯಲ್ಲಿ ತೊಗರಿ, 2 ಎಕರೆಯಲ್ಲಿ 200 ನಿಂಬೆ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ. ಉಳಿದ 3 ಎಕರೆಯಲ್ಲಿ ಬಾಳೆ ಸೇರಿದಂತೆ ವಿವಿಧ ಹಣ್ಣು ಹಾಗೂ ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಇದೇ ಮರಡಿ ಭೂಮಿಯಲ್ಲಿ ಹತ್ತಿ ಬೆಳೆದು ₹4 ಲಕ್ಷ ನಿವ್ವಳ ಲಾಭ ಪಡೆದಿದ್ದಾರೆ. ನಿಂಬೆಯಿಂದ ಪ್ರತಿವರ್ಷ ₹5 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಪ್ರಚಲಿತ ಫಸಲಿನ ಕುರಿತು ಮಾಹಿತಿ ನೀಡುತ್ತಾ, ಈ ವರ್ಷ ಎಲ್ಲ ಕಡೆಗೂ ತೊಗರಿ ಬೆಳೆ ಸರಿಯಾಗಿಲ್ಲ. ಅದಾಗ್ಯೂ ನಮ್ಮ ಜಮೀನಿನ ತೊಗರಿಯಿಂದ ₹3 ಲಕ್ಷ ಆದಾಯ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಚನ್ನಪ್ಪ.
ನಿವೃತ್ತಿಯ ನಂತರ ಬಂದ ಹಣದಿಂದ ನೆಮ್ಮದಿಯಾಗಿ ಜೀವನ ಮಾಡಬಹುದಾಗಿತ್ತು. ಆದರೆ ನನಗೆ ಸುಮ್ಮನೆ ಕುಳಿತು ತಿನ್ನುವುದು ಆಗುವುದಿಲ್ಲ. ನನ್ನಲ್ಲಿ ಇನ್ನೂ ಶಕ್ತಿಯಿದೆ. ಜೊತೆಗೆ ನನ್ನ ಹತ್ತಿರ ಬೆಳೆಯುವ ಭೂಮಿಯಿದೆ. ಭಾವಿಯಲ್ಲಿ ನೀರಿದೆ ಎಲ್ಲಕ್ಕಿಂತ ಮುಖ್ಯವಾಗಿ ಕನ್ನೋಳ್ಳಿ ಹಿರೇಮಠದ ಹಿರಿಯ ಸ್ವಾಮೀಜಿಯವರ ಹಾಗೂ ಸಿದ್ಧೇಶ್ವರಶ್ರೀಗಳ ಮಾರ್ಗದರ್ಶನ ಹಾಗೂ ಆಶೀರ್ವಾದವಿದೆ. ಯಾವುದೇ ಕಾರಣಕ್ಕೂ ವಿಶ್ರಮಿಸುವುದಿಲ್ಲ ಎನ್ನುತ್ತಾರೆ 65ರ ಚನ್ನಪ್ಪ ಕಾರಜೋಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.