ADVERTISEMENT

ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ಆರ್ಥಿಕ ಸಂಕಷ್ಟ: ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:41 IST
Last Updated 15 ಸೆಪ್ಟೆಂಬರ್ 2025, 4:41 IST
ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಖಾನೆಯ 7ನೇ ವರ್ಷದ ಸರ್ವಸಾಧಾರಣ ಮಹಾ ಸಭೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.  
ಇಂಡಿ ತಾಲ್ಲೂಕಿನ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಖಾನೆಯ 7ನೇ ವರ್ಷದ ಸರ್ವಸಾಧಾರಣ ಮಹಾ ಸಭೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಿದರು.     

ಇಂಡಿ:ರೈತರು ಹೆಚ್ಚಿನ ಕಬ್ಬು ಕಳಿಸಿಲ್ಲದಿರುವುದರಿಂದ ಮತ್ತು  ಎಳೆಯ ಕಬ್ಬು (ಬಲಿಯದಿರುವ ಕಬ್ಬು) ಕಾರ್ಖಾನೆಗೆ ಕಳಿಸಿದ್ದರಿಂದ ಕಾರ್ಖಾನೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಶಾಸಕ ಮತ್ತು ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕಾರ್ಖಾನೆಯ ಆವರಣದಲ್ಲಿ ಭಾನುವಾರ ನಡೆದ 2024-2025ನೇ ಸಾಲಿನ 7ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದ ಅವರು, ಇದೇ ರೀತಿ ಮುಂದುವರೆದರೆ ಕಾರ್ಖಾನೆಗೆ ಹೆಚ್ಚಿನ ಆರ್ಥಿಕ ಸಂಕಷ್ಟ ಬರುವುದು ನಿಶ್ಚಿತ. ಕಾರಣ ಇದನ್ನು ಯಾರಿಗಾದರೂ ಲೀಜ್ ಮೂಲಕ ನಡೆಸಲು ಕೊಡುವುದು ಸೂಕ್ತ ಎಂದು ಹೇಳಿದರು.

ಸಭೆಗೆ ಹಾಜರಾಗಿದ್ದ ಷೇರುದಾರ ರೈತ ಶ್ರೀಮಂತ ಇಂಡಿ ಮಾತನಾಡಿ, ಕಾರ್ಖಾನೆಯನ್ನು ಲೀಜ್ ಕೊಡುವ ವಿಚಾರಕ್ಕೆ ನಮ್ಮ ಸಹಮತವಿಲ್ಲ. ಇದನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದಾಗ ಅದಕ್ಕೆ ಷೇರುದಾರ ರೈತ ಗುರುನಾಥ ಬಗಲಿ ಅನುಮೋದಿಸಿದರು. ಇದಕ್ಕೆ ರೈತರೆಲ್ಲರೂ ಚೆಪ್ಪಾಳೆ ತಟ್ಟಿ ಅಂಗೀಕರಿಸಿದರು.

ADVERTISEMENT

ಸಭೆಯಲ್ಲಿದ್ದ ಷೇರುದಾರ ರೈತ ಸಂಗಣ್ಣ ಈರಾಬಟಿ ಮಾತನಾಡಿ, ಪ್ರತೀ ಷೇರುದಾರ ರೈತರಿಂದ 2 ಟನ್ ಕಬ್ಬಿಗೆ ಹಣ ಕೊಡದೇ ಅದನ್ನು ಕಾರ್ಖಾನೆಗೆ ಷೇರು ಎಂದು ತೆಗೆದುಕೊಂಡು ಕಾರ್ಖಾನೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಿ,  ಸಹಕಾರಿ ರಂಗದಲ್ಲಿಯೇ ನಡೆಸಿ ಎಂದು ಸಲಹೆ ನೀಡಿದರು.

ರೈತ ಮಹಾದೇವ ಹಿರೇಕುರುಬರ ಮಾತನಾಡಿ, ರೈತರಿಂದ ಷೇರು ಹಣ ಸಂಗ್ರಹಿಸಿ, ಇದನ್ನು ಸಹಕಾರಿ ರಂಗದಲ್ಲಿಯೇ ನೀವೇ ನಡೆಸಬೇಕು ಎಂದರು.

ಶ್ರೀಮಂತ ಇಂಡಿ ಮಾತನಾಡಿ, ರೈತರು ಕಾರ್ಖಾನೆಗೆ ಕಳಿಸುವ ಪ್ರತಿ ಟನ್ ಕಬ್ಬಿನಿಂದ ₹100 ಷೇರು ಪಡೆದುಕೊಳ್ಳಲು ಸಲಹೆ ನೀಡಿದರು.

ರೈತ ವಿಜುಗೌಡ ಪಾಟೀಲ, ಪ್ರತೀ ಷೇರುದಾರ ರೈತರಿಂದ ₹5 ಸಾವಿರ ಷೇರು ಸಂಗ್ರಹಿಸುವಂತೆ ಹಾಗೂ ವಿಠ್ಠಲ ನಿಂಬೆಣ್ಣನವರ, ಪ್ರತೀ ಷೇರುದಾರ ರೈತರಿಂದ ₹25 ಸಾವಿರ ಷೇರು ಸಂಗ್ರಹಣೆಗೆ ಸಲಹೆ ನೀಡಿದರು.

ಪ್ರಶಾಂತ ಬಿರಾದಾರ, ಡಿ.ಆರ್.ಶಹಾ, ಹಿರೇಬೇವನೂರ ಗ್ರಾಮದ ಪಾಟೀಲ ಮುಂತಾದ ರೈತರು ಮಾತನಾಡಿ, ಷೇರುದಾರ ರೈತರು ಕಾರ್ಖಾನೆಗೆ ಆರ್ಥಿಕ ಸಹಾಯ ಮಾಡುತ್ತೇವೆ. ಅದು ಹೇಗೆ ಎಂಬುದನ್ನು ಆಡಳಿತ ಮಂಡಳಿಯೇ ನಿರ್ಧರಿಸಿ ಸೂಚನೆ ಕೊಡಿ, ನೀವು ಸೂಚನೆ ಕೊಟ್ಟ ರೀತಿಯಲ್ಲಯೇ ಷೇರುದಾರ ರೈತರು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಯಾವುದೇ ಸಂದರ್ಭದಲ್ಲಿಯೂ ಸಹಕಾರಿ ರಂಗದಲ್ಲಿರುವ ಕಾರ್ಖಾನೆಯನ್ನು ಲೀಜ್ ನಲ್ಲಿ ಬೇರೆಯವರಿಗೆ ಕೊಡುವದು ಬೇಡ ಎಂದು ಸಭೆ ಒಕ್ಕೋರಲಿನಿಂದ ಮನವಿ ಮಾಡಿಕೊಂಡಿತು.

ಉಪಾಧ್ಯಕ್ಷ ಎಂ.ಆರ್.ಪಾಟೀಲ, ನಿರ್ದೇಶಕರಾದ ಸಿದ್ದಣ್ಣ ಬಿರಾದಾರ, ಜೆಟ್ಟೆಪ್ಪ ರವಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ರೇವಗೊಂಡಪ್ಪಗೌಡ ಪಾಟೀಲ, ಬಸವರಾಜ ಧನಶ್ರೀ, ವಿಶ್ವನಾಥ ಬಿರಾದಾರ, ದುಂಡಪ್ಪ ಕೇಡ, ಸಿದ್ದುಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕಿ ಎಸ್.ಕೆ.ಭಾಗ್ಯಶ್ರೀ ಉಪಸ್ಥಿತರಿದ್ದರು.

ಕಾರ್ಖಾನೆಗೆ ಆರ್ಥಿಕ ಸಹಾಯ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಆರ್ಥಿಕ ಸಹಾಯ ನೀಡಿದರೆ ಸಹಕಾರಿ ರಂಗದಲ್ಲಿಯೇ ಮುಂದುವರೆಸೋಣ ಇಲ್ಲದಿದ್ದರೆ ನಿಮ್ಮೊಂದಿಗೆ ಮತ್ತೊಮ್ಮೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳೋಣ 
-ಯಶವಂತರಾಯ ಗೌಡ ಪಾಟೀಲಶಾಸಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.