ವಿಜಯಪುರ: ತಾಳಿಕೋಟೆ ಬಳಿ ಕಾರಿಗೆ ಗುದ್ದಿದ ಕಬ್ಬು ಕಟಾವು ಮಾಡುವ ವಾಹನ– ಐವರ ಸಾವು
ವಿಜಯಪುರ: ತಾಳಿಕೋಟೆ ತಾಲ್ಲೂಕಿನ ಬಿಳೆಬಾವಿ ಕ್ರಾಸ್ ಬಳಿ ಕಾರು ಹಾಗೂ ತೊಗರಿ ಕಟಾವು ಮಾಡುವ ಯಂತ್ರದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ಐವರು ಸಾವಿಗೀಡಾಗಿದ್ದಾರೆ.
ಅಪಘಾತದ ರಭಸಕ್ಕೆ ಕಾರಲ್ಲಿದ್ದ ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರು ವಿಜಯಪುರ ತಾಲ್ಲೂಕಿನ ಅಲಿಯಾಬಾದ್ ನಿವಾಸಿಗಳಾದ ನಿಂಗಪ್ಪ ಪಾಟೀಲ್ (55) ಶಾಂತವ್ವ ಶಂಕರ ಪಾಟೀಲ್ (45), ಭೀಮಶಿ ಸಂಕನಾಳ (65) ಶಶಿಕಲಾ ಜೈನಾಪೂರ (45) ಹಾಗೂ ದಿಲೀಪ್ ಪಾಟೀಲ್ (50) ಎಂದು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆ ಅಗ್ನಿ ಗ್ರಾಮದಲ್ಲಿ ವರನಿಗೆ ಕನ್ಯೆ ನೋಡಲು ಹೋಗಿದ್ದ ಐವರು, ಹುಣಸಗಿಯಿಂದ ತಾಳಿಕೋಟೆ ಮಾರ್ಗವಾಗಿ ತಮ್ಮ ಊರಿಗೆ ಕಾರಿನಲ್ಲಿ ವಾಪಸ್ ಬರುವ ವೇಳೆ ಕ್ರೂಸರ್ ಹಿಂದಿಕ್ಕುವ ಭರದಲ್ಲಿ ತೊಗರಿ ಕಟಾವು ಮಾಡುವ ಮಷಿನ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಕಾರಿನಲ್ಲಿದ್ದ ಶವಗಳನ್ನು ಜೆಸಿಬಿ ಯಂತ್ರದ ಮೂಲಕ ತಾಳಿಕೋಟೆ ಪೊಲೀಸರು ಹೊರ ತೆಗೆದು, ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಬಸನಬಾಗೇವಾಡಿ ಸಮುದಾಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.