
ಇಂಡಿ: ‘ಮಣ್ಣಿನ ಫಲವತ್ತತೆ ಕಾಪಾಡಿ ಆಧುನಿಕ ತಂತ್ರಜ್ಞಾನವಾದ ಹನಿ ನೀರಾವರಿ ಪದ್ದತಿ ಅಳವಡಿಸಿ ಕಬ್ಬಿನ ಇಳುವರಿ ಹೆಚ್ಚಿಸಲು ಸಾಧ್ಯ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶುಕ್ರವಾರ ತಾಲ್ಲೂಕಿನ ಲಚ್ಯಾಣ ಅಹಿರಸಂಗ ರಸ್ತೆಯ ಶ್ರೀಮಂತ ಇಂಡಿ ಅವರ ತೋಟದಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ವಿಜಯಪುರ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಮರಗೂರ ಶ್ರೀ ಶಾಂತೇಶ್ವರ ವಿವಿಧೋದ್ದೇಶಗಳ ಸಹಕಾರಿ ಸಂಘ ಹೊರ್ತಿ ಅವರ ಆಶ್ರಯದಲ್ಲಿ ಏರ್ಪಡಿಸಿದ್ದ ‘ಕಬ್ಬಿನ ಬೆಳೆ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಒಂದು ಎಕರೆ ಪ್ರದೇಶದಲ್ಲಿ 40 ಸಾವಿರ ಸಸಿ ನೆಡಬೇಕು. ಒಂದು ಸಸಿ ಎರಡರಿಂದ ಮೂರು ಕಿಲೋ ಆಗುವಂತೆ ನೋಡಿಕೊಳ್ಳಬೇಕು. ಆಗ ಕಬ್ಬಿನ ಅಧಿಕ ಇಳುವರಿ ಬರುತ್ತದೆ’ ಎಂದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನಾವು ಕಬ್ಬಿನ ತಳಿ ಆಯ್ಕೆ ಮಾಡುವಾಗ ಉತ್ತಮ ತಳಿ ಆಯ್ಕೆ ಮಾಡಬೇಕು. ಕಬ್ಬು ಬೆಳೆಯು ಚೆನ್ನಾಗಿ ಬರಬೇಕು, ರಿಕವರಿ ಚೆನ್ನಾಗಿ ಬರಬೇಕು ಅಂತಹ ತಳಿಗಳಾದ 86032, ಸಂಕೇಶ್ವರದ ಎಸ್ಎನ್ ಕೆ , ಎಂ ಎಸ್ 10001, ಅಮೃತಾ 9004 ಮತ್ತು 133374 ನಂತಹ ತಳಿಗಳನ್ನು ಆಯ್ಕೆ ಮಾಡಿ ಕಬ್ಬಿನ ಇಳುವರಿ ಪಡೆಯಲು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಕಬ್ಬು ವರ್ಷದ 365 ದಿನ ಮತ್ತು ದಿನದ 24 ಗಂಟೆ ಬೆಳೆಯುತ್ತದೆ. ಆದ್ದರಿಂದ ಆಧುನಿಕ ಪದ್ದತಿಯ ಡ್ರಿಪ್ ನಿರಾವರಿ ಅಳವಡಿಸಿದರೆ ಶೇ 30 ರಿಂದ 40 ರಷ್ಟು ಇಳುವರಿ ಹೆಚ್ಚಿಗೆ ಪಡೆಯಬಹುದು ಎಂದರು.
ಸಂಕೇಶ್ವರದ ತಳಿಶಾಸ್ತ್ರದ ವಿಜ್ಞಾನಿ ಸಂಜಯ ಪಾಟೀಲ, ಕಬ್ಬು ಅಭಿವೃದ್ದಿ ಸಂಶೋಧನಾ ಕೇಂದ್ರ ಬೆಳಗಾವಿಯ ನಿರ್ದೇಶಕ ರಾಜಗೋಪಾಲ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಶಂಕರ ಮೂರ್ತಿ, ಪ್ರಗತಿಪರ ರೈತ ಎಂ.ಆರ್.ಪಾಟೀಲ, ಬಸವರಾಜ ಸಾಹುಕಾರ, ಶ್ರೀಮಂತ ಇಂಡಿ ಮಾತನಾಡಿದರು.
ಇದೇ ವೇಳೆ ಎಕರೆಗೆ 172 ಟನ್ ಕಬ್ಬು ಬೆಳೆದು ರೈತರಿಗೆ ಮಾರ್ಗದರ್ಶನ ನೀಡುತ್ತಿರುವ ಶ್ರೀಮಂತ ಇಂಡಿ ಮತ್ತು ನಾರಾಯಣ ಸಾಳುಂಕೆ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಆಡಳಿತ ಮಂಡಳಿ ಸದಸ್ಯ ಪಾರ್ವತಿ ಕುಲಕರ್ಣಿ, ಸಹ ವಿಸ್ತರಣಾ ನಿರ್ದೇಶಕ ಡಾ.ಎಂ.ಎಂ.ಜಮಾದಾರ, ರೇವಗೊಂಡಪ್ಪಗೌಡ ಪಾಟೀಲ, ಪ್ರಗತಿಪರ ರೈತ ಗುರುನಾಥ ಬಗಲಿ, ಭೀಮಾಶಂಕರ ಕಾರ್ಖಾನೆ ಎಂ.ಡಿ ಭಾಗ್ಯಶ್ರೀ ಕುಂಬಾರ, ಹಿರೇಬೆವನೂರ ಮತ್ತು ನಾದ ಕೆಡಿ ಸಕ್ಕರೆ ಕಾರ್ಖಾನೆ ಎಂ.ಡಿ, ಕೃಷಿ ಉಪನಿರ್ದೇಶಕ ಚಂದ್ರಕಾಂತ ಪವಾರ, ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಬಾಬು ಸಾಹುಕಾರ ಮೇತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.