ADVERTISEMENT

ಜನಪರ ನಾಯಕನನ್ನು ಬೆಂಬಲಿಸಿ: ನಡಹಳ್ಳಿ

ಕವಡಿಮಟ್ಟಿ, ಹಿರೇಮುರಾಳ, ಅರೇಮುರಾಳ, ಜಂಗಮುರಾಳದಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 13:58 IST
Last Updated 24 ಫೆಬ್ರುವರಿ 2023, 13:58 IST
ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳದಲ್ಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು
ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳದಲ್ಲಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರನ್ನು ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮಾಡಿದರು   

ಮುದ್ದೇಬಿಹಾಳ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ 25 ವರ್ಷಗಳ ಆಡಳಿತ ಮತ್ತು ನನ್ನ ಐದು ವರ್ಷದ ಅಭಿವೃದ್ಧಿಯ ಆಡಳಿತವನ್ನು ಮತದಾರರು ನೋಡಿದ್ದೀರಿ. ಎರಡೂ ಅವಧಿಯನ್ನು ತುಲನೆ ಮಾಡಿ, ನ್ಯಾಯದ ತಕ್ಕಡಿಯಲ್ಲಿಟ್ಟು ತೂಗಿ, ಯೋಚನೆ ಮಾಡಿ ಅಭಿವೃದ್ಧಿ ಪರ, ಜನರ ಪರ, ಬಡವರ ಪರ ಇರುವಂಥ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜಾಣತನವನ್ನು ಮತದಾರರು ತೋರಿಸಬೇಕು ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕವಡಿಮಟ್ಟಿ, ಹಿರೇಮುರಾಳ, ಅರೇಮುರಾಳ, ಜಂಗಮುರಾಳ ಗ್ರಾಮಗಳಲ್ಲಿ ಕೆಬಿಜೆಎನ್‌ಎಲ್ ವತಿಯಿಂದ ಮಂಜೂರಾಗಿರುವ ₹10 ಕೋಟಿ ಮೌಲ್ಯದ ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ತಾಲ್ಲೂಕಿನ ಜನ ಬಹಳ ಒಳ್ಳೆಯವರು, ಮುಗ್ಧರು. ಕಾಂಗ್ರೆಸ್‌ನ ಮಾಜಿ ಶಾಸಕರಿಗೆ ನಿರಂತರ ಅಧಿಕಾರ ಕೊಟ್ಟಿದ್ದರು ಆ ಸಂದರ್ಭ ಅವರು ಜನರ ಪರ ಕೆಲಸ ಮಾಡಲಿಲ್ಲ. 25 ವರ್ಷ ರಾಜಕೀಯ ಮಾಡಿದ ಅವರು ಒಂದು ದಿನವಾದರೂ ಈ ಭಾಗದ ಅಭಿವೃದ್ದಿ ಕೆಲಸದ ಬಗ್ಗೆ ವಿಧಾನಸೌಧದಲ್ಲಿ ಧ್ವನಿ ಎತ್ತಿರುವ ದಾಖಲೆ ತೋರಿಸಿದರೆ ನಾನು ನೀವು ಹೇಳಿದ್ದನ್ನು ಕೇಳಲು ತಯಾರಿದ್ದೇನೆ ಎಂದು ಸವಾಲು ಹಾಕಿದರು.

ADVERTISEMENT

ಚುನಾವಣೆಯಲ್ಲಿ ಎಂಥ ವ್ಯಕ್ತಿಯನ್ನು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಅಭಿವೃದ್ಧಿ ಕೆಲಸಗಳು ಆಗುತ್ತವೆ. ನೀವು ಆಯ್ಕೆ ಮಾಡುವವರು ಜನರ ಬಗ್ಗೆ ಕಳಕಳಿ ಇರುವಂಥವರು, ಬಡವರ ಬಗ್ಗೆ ಯೋಚಿಸುವವರು, ವಿಧಾನಸಭೆಯಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವವರು, ಸರ್ಕಾರದ ಯೋಜನೆಗಳನ್ನು ಆದಷ್ಟು ಬೇಗ ನಮ್ಮ ಭಾಗಕ್ಕೆ ತಂದು ಕೊಡುವ ಸಾಮರ್ಥ್ಯ ಹೊಂದಿರುವವರು ಆಗಿರಬೇಕು. ಇವೆಲ್ಲ ಅರ್ಹತೆ ಇರುವವರನ್ನು ಆಯ್ಕೆ ಮಾಡಿದರೆ ನಿಮ್ಮ ಆಯ್ಕೆ ಸಾರ್ಥಕವಾಗುತ್ತದೆ ಎಂದರು.

ಈ ಹಿಂದೆ 25 ವರ್ಷ ಒಬ್ಬರನ್ನೇ ಆಯ್ಕೆ ಮಾಡಿದ್ದೀರಿ. ಅವರೇನು ಅಭಿವೃದ್ದಿ ಮಾಡಿದ್ದಾರೆ, ಈ ತಾಲ್ಲೂಕಿಗೆ ಏನು ಮಾಡಿದ್ದಾರೆ ಅನ್ನೋದನ್ನ ವಿಚಾರ ಮಾಡಬೇಕು. 25 ವರ್ಷ ಅಧಿಕಾರ ನಡೆಸಿದವರು, 5 ವರ್ಷ ಅಧಿಕಾರ ನಡೆಸಿದವರು ಏನು ಮಾಡಿದ್ದಾರೆ ಅನ್ನೋದರ ತುಲನೆ ಮಾಡಿ ನಿಮ್ಮ ಪ್ರತಿನಿಧಿ ಸೇವಕನನ್ನು ಆಯ್ಕೆ ಮಾಡಬೇಕು ಎಂದರು.

25 ವರ್ಷಗಳಿಂದ ಆಗದೆ ಇದ್ದ ವಿದ್ಯುತ್, ನೀರು, ರಸ್ತೆ ಮೊದಲಾದ ಮೂಲಭೂತ ಕೆಲಸಗಳನ್ನು ಮಾಡಿದ್ದೇನೆ. ಮುಂದೆ ಸರ್ಕಾರ 12 ತಿಂಗಳು ಕರೆಂಟ್ ಕೊಡುವ ಯೋಜನೆ ಜಾರಿಗೊಳಿಸಿದರೆ ನಮ್ಮ ತಾಲ್ಲೂಕಿನಲ್ಲೇ ಅದು ಮೊದಲು ಪ್ರಾರಂಭಗೊಳ್ಳುವಷ್ಟು ಪೂರ್ವಯೋಜಿತವಾಗಿ ವಿದ್ಯುತ್ ಕೆಲಸ ಮಾಡಲಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಒಬಿಸಿ ಮೋಚಾದ ಅಧ್ಯಕ್ಷ ಲಕ್ಷ್ಮಣ ಬಿಜ್ಜೂರ, ಮುಖಂಡರಾದ ಬಸವಂತ್ರಾಯ ಪಾಟೀಲ, ಬಸವರಾಜ ಗುಳಬಾಳ, ಬಸವರಾಜ ಸರೂರ, ಬಸವರಾಜ ಹೊಕ್ರಾಣಿ, ಬಸಲಿಂಗಪ್ಪ ಮೇಟಿ, ಮಾಳಪ್ಪ ಬಳಬಟ್ಟಿ, ಚಂದಾಲಿಂಗ ಹಂಡರಗಲ್ಲ, ಹಣಮಂತ ಹಂಡರಗಲ್ಲ, ಮಲ್ಲಯ್ಯ ಹಿರೇಮಠ, ನಿಂಗಣ್ಣ ರಾಮೋಡಗಿ, ಗುರುಸಂಗಯ್ಯ ಹಿರೇಮಠ, ಬಸವರಾಜ ಜೈನಾಪೂರ, ಇಮಾಂಬು ಮುಲ್ಲಾ, ನಿಂಗಣ್ಣ ತಾಳಿಕೋಟಿ, ಶೇಖಣ್ಣ ನಾರಾಯಣಪೂರ ಇದ್ದರು.

ಶಾಸಕರನ್ನು ಮುರಾಳ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ಡೊಳ್ಳು ವಾದ್ಯ ಸಮೇತ ಮೆರವಣಿಗೆ ಮೂಲಕ ಕರೆತಂದು ಸನ್ಮಾನ ಮಾಡಿದರು. ಮಹಿಳೆಯರು ಆರತಿ ಬೆಳಗಿ ಶುಭ ಕೋರಿದರು.

****

ಕಾಂಗ್ರೆಸ್ ನಾಯಕರು ನೀರಾವರಿ ನಾವು ಮಾಡಿದ್ದೇವೆ ಎನ್ನುತ್ತಾರೆ. ನೀರಾವರಿ ಬಗ್ಗೆ ಒಬ್ಬರೂ ದನಿ ಎತ್ತಿರಲಿಲ್ಲ. 2008ರಲ್ಲಿ ದೇವರ ಹಿಪ್ಪರಗಿಯಿಂದ ಆಲಮಟ್ಟಿವರೆಗೆ ಪಾದಯಾತ್ರೆ ಮಾಡಿದೆ. ಇದೇ ಕಾಂಗ್ರೆಸ್ ನಾಯಕರು ನನ್ನ ಜೊತೆಗೂಡಿ ಭಾಷಣ ಮಾಡಿದರು

–ಎ.ಎಸ್‌.ಪಾಟೀಲ ನಡಹಳ್ಳಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.