ADVERTISEMENT

ವಿಜಯಪುರ | ಸರ್ಕಾರ ಕನೇರಿ ಶ್ರೀಗಳ ಕ್ಷಮೆ ಕೇಳಬೇಕು: ಸುರೇಶ ಬಿರಾದಾರ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:48 IST
Last Updated 18 ಅಕ್ಟೋಬರ್ 2025, 5:48 IST
ಸುರೇಶ ಬಿರಾದಾರ
ಸುರೇಶ ಬಿರಾದಾರ   

ವಿಜಯಪುರ: ಕನೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸುತ್ತೇವೆ. ಜಿಲ್ಲಾಡಳಿತದ ಕ್ರಮ ಸಮಂಜಸವಲ್ಲ, ಕಾಂಗ್ರೆಸ್ ನಾಯಕರು ಇದರ ಹಿಂದೆ ಇದ್ದಾರೆ. ಸರ್ಕಾರ ಆದೇಶ ಹಿಂಪಡೆಯಬೇಕು, ಶ್ರೀಗಳ ಕ್ಷಮೆ ಕೇಳಬೇಕು ಎಂದು ಬಿಜೆಪಿ ಮುಖಂಡ ಸುರೇಶ ಬಿರಾದಾರ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಕನೇರಿ ಶ್ರೀಗಳ  ವಿಷಯ ದೀರ್ಘಕ್ಕೆ ಒಯ್ಯಬಾರದಿತ್ತು. ನಿಷೇಧ ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ಪ್ರತಿ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಲಿಂಗಾಯತ–ವೀರಶೈವರನ್ನು ಒಡೆಯುವ ಕಾರ್ಯ ನಡೆದಿದೆ‌. ಈ ಹಿಂದೆ ಪ್ರತ್ಯೇಕ ಧರ್ಮದ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆ ಬಳಿಕ ಏನೂ ಮಾಡಲಿಲ್ಲ. ಇದೀಗ ಲಿಂಗಾಯತ- ವೀರಶೈವ ಎಂದು ಒಡೆಯುವ ಕೆಲಸ ನಡೆದಿದೆ ಎಂದು ಆರೋಪಿಸಿದರು.

ADVERTISEMENT

‌ಭಾಲ್ಕಿ ಶ್ರೀ, ಸಾಣೆಹಳ್ಳಿ ಶ್ರೀ, ಗದುಗಿನ ತೋಂಟದಾರ್ಯ ಶ್ರೀ ಮತ್ತು ಎಸ್.ಎಂ. ಜಮದಾರ್ ಅವರು ಕಾಂಗ್ರೆಸ್ ಪರವಾಗಿ ಆಟವಾಡುತ್ತಿದ್ದಾರೆ. ಇವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಸವ ಸಂಸ್ಕೃತಿ ಅಭಿಯಾನ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿರುವನ್ನು ಖಂಡಿಸುತ್ತೇವೆ ಎಂದರು.

ಕಮ್ಯುನಿಸ್ಟ್ ಸಿದ್ಧಾಂತ ತಲೆಯಲ್ಲಿ ತುಂಬಿಕೊಂಡಿರುವ ಕೆಲ ಸ್ವಾಮೀಜಿಗಳು ಬಸವಣ್ಣನನ್ನು ಕಾರ್ಲ್ ಮಾರ್ಕ್ಸ್ ಜೊತೆ  ಹೋಲಿಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಕನೇರಿ ಶ್ರೀಗಳ ಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿರುವುದು ಖಂಡನೀಯ. ದಲಿತರನ್ನು ಕಾಂಗ್ರೆಸ್ ತಪ್ಪು ದಾರಿಗೆ ಬಳಸಿಕೊಳ್ಳಲಾಗಿದೆ, ದಲಿತರು ಭಾಗವಹಿಸಬಾರದು, ದಲಿತರಿಗೆ ಶ್ರೀಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಲಿಂಗಾಯತ ಹಿಂದೂ ಧರ್ಮದ ಭಾಗ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮಾತನಾಡಿ, ಸರ್ಕಾರ ಆರ್. ಎಸ್. ಎಸ್ ಚಟುವಟಿಕೆಗೆ ನಿರ್ಬಂಧ ವಿಧಿಸಿರುವುದು ಖಂಡನೀಯ. ಆರ್‌ಎಸ್‌ಎಸ್‌ ಅನ್ನು ರಾಜಕೀಯ ಪಕ್ಷಕ್ಕೆ ಹೋಲಿಸುವುದು ತಪ್ಪು, ಇದೊಂದು ಸಾಂಸ್ಕೃತಿಕ ಸಂಘಟನೆ. ನಿರ್ಬಂಧ ವಿಧಿಸುವುದರಿಂದ ಆರ್. ಎಸ್. ಎಸ್ ಗೆ ಯಾವುದೇ ಹಾನಿಯಿಲ್ಲ ಎಂದರು.  

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಭೀಮಾ ಶಂಕರ ಹದನೂರ,  ಮಲ್ಲು ಕಲಾದಗಿ, ಮಹೇಂದ್ರ ನಾಯಕ, ವಿಜು ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಲಿಂಗಾಯತ ಹೋರಾಟ ಮುಂಚೂಣಿಯಲ್ಲಿರುವ ಜಿಲ್ಲಾ ಸಚಿವರು ವೀರಶೈವ – ಲಿಂಗಾಯತ ಸಮಾಜವನ್ನು ಒಡೆದು ಎರಡನೇ ಜಿನ್ನಾ ಆಗಲು ಹೊರಟಿದ್ದಾರೆ 
ಸುರೇಶ ಬಿರಾದಾರ, ಬಿಜೆಪಿ ಮುಖಂಡ 
ಕನೇರಿ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ವಿಧಿಸಿರುವುದರಲ್ಲಿ ಸರ್ಕಾರದ ತಪ್ಪಿದೆ ಇದು ಹಿಂದೂ ವಿರೋಧಿ ನೀತಿ ಆಗಿದೆ ಶ್ರೀಗಳ ಪರ ಹೋರಾಟ ಮಾಡುತ್ತೇವೆ 
ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ

ದೇವಸ್ಥಾನಗಳಿಗೆ ನೋಟಿಸ್‌ಗೆ ವಿರೋಧ

ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಸಂರಕ್ಷಣೆ ಕಾರ್ಯಗಳಾದ ದಾಖಲೆಗಳ ನವೀರಕರಣ ನೆಪದಲ್ಲಿ ನಗರ ವ್ಯಾಪ್ತಿಯ 50ಕ್ಕೂ ಅಧಿಕ ದೇವಸ್ಥಾನ ಗುಡಿಗಳನ್ನು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಸೇರಿಸಲು ನೋಟಿಸ್ ನೀಡಿದೆ. ಇದು ಸರಿಯಲ್ಲ ಹಿಂಪಡೆಯಬೇಕು ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಆಗ್ರಹಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದೇವಸ್ಥಾನಗಳು ಉತ್ತಮ ಕೆಲಸ ಮಾಡುತ್ತಿವೆ. ಹಿಂದುಗಳ ಶ್ರದ್ಧಾ ಕೇಂದ್ರಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದು ಸರಿಯಲ್ಲ ನೋಟಿಸ್‌ ವಾಪಸ್ ಪಡೆಯಬೇಕು ಇಲ್ಲವಾದರೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು. ದೇವಸ್ಥಾನ ಟ್ರಸ್ಟ್‌ಗಳಲ್ಲಿ ನಮ್ಮದೇ ಆದ ಆಡಳಿತ ವ್ಯವಸ್ಥೆ ಇರುತ್ತದೆ. ದೇಣಿಗೆ ಪಡೆದು ನಡೆಯುತ್ತಿವೆ. ಧಾರ್ಮಿಕ ಇಲಾಖೆ ವ್ಯಾಪ್ತಿಗೆ ಒಳ ಪಟ್ಟರೆ ಸಮಸ್ಯೆ ಆಗಲಿದೆ ಎಂದರು.  ಮುಖಂಡರಾದ ಸಂದೀಪ ಪಾಟೀಲ ಸಿದ್ದು ಮಲ್ಲಿಕಾರ್ಜುನ ಮಠ ಮಹೇಂದ್ರ ನಾಯಕ ವಿಜು ಜೋಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.