ADVERTISEMENT

ತಾಳಿಕೋಟೆ | ಮಳೆಗೆ ಕೆಸರು ಗದ್ದೆಯಾದ ಕಲಕೇರಿ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 6:32 IST
Last Updated 20 ಆಗಸ್ಟ್ 2025, 6:32 IST
ತಾಳಿಕೋಟೆ ತಾಲ್ಲೂಕಿನ ಪ್ರಮುಖ ಗ್ರಾಮವಾಗಿರುವ ಕಲಕೇರಿ ಯ ಬಸ್ ನಿಲ್ದಾಣವು ಮಳೆಯಿಂದಾಗಿ ಕೆಸರುಗದ್ದೆಯಾಗಿ ಪರಿಣಮಿಸಿದೆ.
ತಾಳಿಕೋಟೆ ತಾಲ್ಲೂಕಿನ ಪ್ರಮುಖ ಗ್ರಾಮವಾಗಿರುವ ಕಲಕೇರಿ ಯ ಬಸ್ ನಿಲ್ದಾಣವು ಮಳೆಯಿಂದಾಗಿ ಕೆಸರುಗದ್ದೆಯಾಗಿ ಪರಿಣಮಿಸಿದೆ.   

ತಾಳಿಕೋಟೆ: ತಾಲ್ಲೂಕಿನ ದೊಡ್ಡ ಗ್ರಾಮವೆನ್ನಿಸಿಕೊಂಡಿರುವ ಕಲಕೇರಿಯಲ್ಲಿನ ರಸ್ತೆಗಳಲ್ಲಿ ಕಳೆದ ಒಂದು ವಾರಕ್ಕೂ ಅಧಿಕ ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ, ಜೋರು ಮಳೆಯಿಂದಾಗಿ ಗುಂಡಿಗಳ ಸಂಖ್ಯೆ ಹೆಚ್ಚಿದೆ, ಬಸ್ ನಿಲ್ದಾಣವು ಕೆಸರು ಗದ್ದೆಯಾಗಿ ಪರಿಣಮಿಸಿದೆ.

ಬಸ್‌ಗಾಗಿ ಓಡೋಡಿ ಬರುವ ಪ್ರಯಾಣಿಕರಿಗೆ ಇಲ್ಲಿ ಹೆಜ್ಜೆಗಳೇ ಕಿತ್ತುವುದಿಲ್ಲ. ಅವರ ಪಾದರಕ್ಷೆಗಳು ಪಾದರಕ್ಷಣೆ ಮಾಡಲಾಗದೆ ಕೆಸರುನೆಲದಲ್ಲಿಯೇ ಹೂತು ಹೋಗುತ್ತಿವೆ. ಕಸುವಿನಿಂದ ಕಾಲೆತ್ತಿಡಲು ಹೋದರೆ ಕಾಲು ಜಾರುತ್ತವೆ. ಮೊಣಕಾಲವರೆಗಿನ ವಸ್ತ್ರಗಳು ರಾಡಿ ಸಿಂಪರಣೆ ಮಾಡಿಕೊಳ್ಳುತ್ತವೆ. ಶಾಲೆಗೆ ಹೋಗುವ ಮಕ್ಕಳು-ಶಿಕ್ಷಕರು, ಕಚೇರಿಗೆ ತೆರಳುವ ಉದ್ಯೋಗಿಗಳು, ಕಾರ್ಯಕ್ರಮಕ್ಕೊ ಇನ್ನಾವುದಕ್ಕೊ ಪರ ಊರಿಗೆ ಹೊರಟ ಪ್ರಯಾಣಿಕರು ತಮ್ಮ ಬಟ್ಟೆಗಳಿಗೆ ಕಲೆಯಂಟಿಸಿಕೊಳ್ಳದೆ ಹೋಗಲಾಗದ ಸ್ಥಿತಿ ನಿಲ್ದಾಣದ ಮೈದಾನದ್ದು.

ನಿಲ್ದಾಣವು ಟಾರ್, ಇಲ್ಲವೇ ಸಿಸಿ ರಸ್ತೆ ಮಾಡಿಸಿದರೆ ಈ ಸಮಸ್ಯೆಗಳಿಗೆ ಮುಕ್ತಿ ಸಿಗಬಹುದು. ಆದರೆ ಕಾಮಗಾರಿಗಳೇ ನಡೆಯುತ್ತಿಲ್ಲ ಎಂಬುದು ಜನತೆಯ ಅಳಲು.

ADVERTISEMENT

ಸುತ್ತಲಿನ 60 ಗ್ರಾಮಗಳಿಗೆ ಇದು ಕೇಂದ್ರಸ್ಥಾನವಾಗಿದೆ. ಗ್ರಾಮದಲ್ಲಿ ಸುಪ್ರಸಿದ್ಧ ಮಡಿವಾಳೇಶ್ವರ ದೇವಸ್ಥಾನವಿದೆ. ಶ್ರಾವಣ ಮಾಸದ ಪ್ರಯುಕ್ತ ಭಕ್ತರ ಸಂದಣಿ ಹೆಚ್ಚು. ಜೊತೆಗೆ ಶಾಲೆ- ಕಾಲೇಜು, ವ್ಯಾಪಾರ, ವಹಿವಾಟಿಗೆ, ಆಸ್ಪತ್ರೆಗೆಂದು ಬರುವವರ ಸಂಖ್ಯೆಯೂ ಅಪಾರವಾಗಿದೆ. ಆದರೆ ಬಸ್ ನಿಲ್ದಾಣದ ಸ್ಥಿತಿ ನೋಡಿ ಗಾಬರಿಯಾಗುತ್ತಾರೆ.

ನಿಲ್ದಾಣವೋ ಕೆಸರು ಗದ್ದೆಯೋ ಎಂದು ಭಯ ಬೀಳುವಂತಾಗಿದೆ. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆಯಬೇಕು ಆಯ ತಪ್ಪಿದರೆ ಅಪಾಯ ಖಂಡಿತ. ಇನ್ನು ನಿಲ್ದಾಣದಲ್ಲಿ ಶೌಚಾಲಯ ಬಂದ್ ಆಗಿ ಮೂರ್ನಾಲ್ಕು ತಿಂಗಳೇ ಆಗಿವೆ.  ಮಹಿಳೆಯರಿಗೆಂದು ತಗಡಿನ ಆವರಣದ ಗೋಡೆ ನಿರ್ಮಿಸಿ ಮರೆ ಮಾಡಿದ್ದರೂ ಮಳೆಯಿಂದ ಅವರಿಗೆ ರಕ್ಷಣೆಯಾಗದು. ಅಲ್ಲಿ ಮಹಿಳೆಯರ ಮೂತ್ರಾಲಯವೆಂಬ ಫಲಕವೂ ಇಲ್ಲ.

ನಿಲ್ದಾಣದ ಕಟ್ಟಡವೂ ಚಿಕ್ಕದು. ಮಳೆಯ ಕಾರಣ ಆಶ್ರಯಕ್ಕೆಂದು ಒಳ ಬರುವ ಹೆಚ್ಚಿನವರಿಗೆ ನಿಲ್ದಾಣದ ಸೂರು ಸಾಕಾಗದು. ಸಂಬಂಧಿಸಿದ ಅಧಿಕಾರಿಗಳನ್ನು ವಿಚಾರಿಸಿದರೆ ಶೀಘ್ರದಲ್ಲಿ ನಿಲ್ದಾಣದ ಸುಧಾರಣೆ ನಡೆಯಲಿದೆ ಎನ್ನುತ್ತಾರೆ. ಆದರೆ ಯಾವಾಗ ಎಂಬುದೇ ಸಾರ್ವಜನಿಕರ ಯಕ್ಷಪ್ರಶ್ನೆ. ಅದಕ್ಕುತ್ತರ ದೊರಕಿ ಸಮಸ್ಯೆ ಬಗೆಹರಿದರೆ ಜನತೆ ನಿರಾಳವಾಗಬಹುದು ಎನ್ನುತ್ತಾರೆ ಗ್ರಾಮದ ಮಲ್ಲು ತಳವಾರ ಹಾಗೂ ಶಿಕ್ಷಕ ಎಂ.ಎಲ್.ವಡ್ಡರ.

ತಾಳಿಕೋಟೆ ತಾಲ್ಲೂಕಿನ ಪ್ರಮುಖ ಗ್ರಾಮವಾಗಿರುವ ಕಲಕೇರಿ ಯ ಬಸ್ ನಿಲ್ದಾಣವು ಮಳೆಯಿಂದಾಗಿ ಕೆಸರುಗದ್ದೆಯಾಗಿ ಪರಿಣಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.