ತಾಳಿಕೋಟೆ: ಪಟ್ಟಣದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ವರೆಗೆ ದಾಖಲೆಯ 12. 84 ಸೆಂ.ಮೀ ಮಳೆಯಾಗಿದ್ದು, ತಾಲ್ಲೂಕಿನಾದ್ಯಂತ ರಾತ್ರಿಯ ವೇಳೆ ಮಳೆಯಾಗಿದ್ದು ಕೆಲ ಗ್ರಾಮಗಳಲ್ಲಿ ಮನೆಗಳು ಕುಸಿದಿವೆ.
ತಾಲ್ಲೂಕಿನ ಹಳ್ಳಗಳೆಲ್ಲ ಮಳೆಯಿಂದ ಮತ್ತೆ ಮೈದುಂಬಿಕೊಂಡು ಹರಿಯುತ್ತಿದ್ದು, ಹಾಸ್ಟೆಲ್ ವರೆಗೆ ನೀರು ನಿಂತಿದೆ.
ಕೂಚಬಾಳ ಹಾಗೂ ಬಾವೂರ ಮಧ್ಯೆ ಹರಿಯುವ ಸೋಗಲಿ ಹಳ್ಳಕ್ಕೆ ಪ್ರವಾಹ ಬಂದಿದ್ದು ಸೇತುವೆ ಜಲಾವೃತವಾಗಿದೆ. ರಸ್ತೆ ಸಂಚಾರಕ್ಕೆ ಅಡ್ಡಿ ಆಗಿದೆ ಎಂದು ಗ್ರಾಮದ ಸಚಿನ ಕರ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.
ಮೂಕಿಹಾಳ ಬಳಿಯ ಸೇತುವೆ ಮುಳುಗಿದ್ದು, ತಾಳಿಕೋಟೆಯಿಂದ ಹಡಗಿನಾಳ ಮಾರ್ಗ ಬಂದ್ ಆಗಿದೆ. ಮುದ್ದೇಬಿಹಾಳ, ಬಾಗಲಕೋಟೆಯತ್ತ ತೇರಳಬೇಕಿದ್ದ ಹೆಚ್ಚಿನ ವಾಹನಗಳು ರಾಜ್ಯ ಹೆದ್ದಾರಿಯಲ್ಲಿರುವ ಡೋಣಿ ನದಿ ಸೇತುವೆ ಬಳಸಿ 5 ಕಿ.ಮೀ ಸುತ್ತುಬಳಸಿ ಮಿಣಜಗಿ ಗ್ರಾಮದ ಮೂಲಕ ಚಲಿಸಿದವು.
ಹೆಚ್ಚಿನ ಜಮೀನುಗಳು ಜಲಾವೃತವಾಗಿದ್ದು, ಬೆಳೆಗಳ ಮಧ್ಯೆ ಮಳೆಯ ನೀರು ನಿಂತಿದ್ದರಿಂದ ಬೆಳೆ ಹಾಳಾಗುವ ಭೀತಿಯಲ್ಲಿ ರೈತರು ಕಂಗಾಲಾಗಿದ್ದಾರೆ.
‘ಮಳಿ ಬಂದ್ರೇನ ಕೇಡಿಲ್ಲರಿ, ಹಿಕಟ್ಟ ಬಿತ್ತಿದವರಿಗೆ ಅನುಕೂಲಾಯ್ತು. ಆದ್ರ ಹತ್ತಿ ಬೆಳಿಗಿ ನೆಲಾ ತಂಪಾದರ ಕಾಪು ಉದರತಾವು, ಮೊನ್ನಿ ಮಳಿಗಿ ನೀರು ನಿಂತ ತೊಗರಿ ಬೆಳಿ ನೆಟೆ ಬಿದ್ಬೀದು ಹಾಳಾಗ್ಯಾವರಿ’ ಎಂದು ಕಲಕೇರಿ ಗ್ರಾಮದ ರೈತ ಲಾಳೇಮಶ್ಯಾಕ ಯಲಗೋಡ ತಿಳಿಸಿದರು.
ರಾತ್ರಿಯಿಡೀ ಸುರಿದ ಮಳೆಯಿಂದ ಪಟ್ಟಣದ ಹಲವು ರಸ್ತೆಗಳಲ್ಲಿ ಗುಂಡಿಗಳು ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಪಟ್ಟಣದಿಂದ ಕಲಕೇರಿಗೆ ಹೋಗುವ ಮಾರ್ಗದಲ್ಲಿನ ಕೆಸರಟ್ಟಿಯಿಂದ ಬಿಂಜಲಭಾವಿ ಗ್ರಾಮದ ಬಳಿಯ ಸುಮಾರು 8 ಕಿ.ಮೀ ರಸ್ತೆ ಹಾಳಾಗಿದೆ. ಕಾರಗನೂರು ಮತ್ತು ಹರನಾಳ್ ನಲ್ಲಿ ಮೂರು ಮನೆ ಭಾಗಶಃ ಹಾನಿಯಾಗಿವೆ.
‘ಮೂಕಿಹಾಳ ಬಳಿಯ ಸೋಗ್ಲಿಹಳ್ಳದ ಸೇತುವೆ ಮೇಲೆ ನೀರಿನ ಪ್ರವಾಹದಿಂದ ಮುಚ್ಚಿಹೋಗಿದ್ದು ಸಂಚಾರ ಸ್ಥಗಿತವಾಗಿದೆ. ಮಳೆಯ ಕಾರಣ ಡೋಣಿ ನದಿಯ ಪ್ರವಾಹ ಹೆಚ್ಚುತ್ತಿದ್ದು ನದಿ ದಂಡೆಗಳಲ್ಲಿ ಜನ-ಜಾನುವಾರು ಸಂಚಾರ ನಿಲ್ಲಿಸಬೇಕು’ ಎಂದು ತಹಶೀಲ್ದಾರ್ ಡಾ.ವಿನಯಾ ಹೂಗಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.