ADVERTISEMENT

ತಾಂಬಾ | ಹಿಂದೂ–ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

ಗವಿಸಿದ್ಧೇಶ್ವರ, ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:32 IST
Last Updated 21 ಅಕ್ಟೋಬರ್ 2025, 2:32 IST
<div class="paragraphs"><p>ತಾಂಬಾ ಗ್ರಾಮದ ಸೋಮವಾರ ಗವಿಸಿದ್ಧೇಶ್ವರ ದೇವಸ್ಥಾನದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಉಪವಾಸ ವ್ರತಾಚರಣೆ ಮುಗಿಸಿ ಪ್ರಸಾದ ಸ್ವೀಕರಿಸಿದರು</p></div>

ತಾಂಬಾ ಗ್ರಾಮದ ಸೋಮವಾರ ಗವಿಸಿದ್ಧೇಶ್ವರ ದೇವಸ್ಥಾನದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಉಪವಾಸ ವ್ರತಾಚರಣೆ ಮುಗಿಸಿ ಪ್ರಸಾದ ಸ್ವೀಕರಿಸಿದರು

   

ತಾಂಬಾ: ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಕೃಪೆಗೆ ಪಾತ್ರರಾಗಲು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಜಾತಿ-ಧರ್ಮ ಬದಿಗೊತ್ತಿ ಒಂದು ತಿಂಗಳು ಉಪವಾಸ ವ್ರತಾಚರಣೆಯನ್ನು ಮುಕ್ತಾಯಗೊಳಿಸಿದರು.

ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ತಾಂಬಾ ಗ್ರಾಮದ ಗವಿಸಿದ್ಧೇಶ್ವರ ದೇವರ ಮತ್ತು ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವವೂ ನಡೆಯಲಿದ್ದು, ಎರಡೂ ದೇವರ ಜಾತ್ರೆ ಒಟ್ಟಿಗೆ ನಡೆಯುವುದು ವಿಶೇಷ.

ADVERTISEMENT

ಗವಿಸಿದ್ಧೇಶ್ವರ ಮತ್ತು ಮಹಾಲಕ್ಷ್ಮೀಯ ಮೇಲೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರ ಅಪಾರ ನಂಬಿಕೆ, ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ದೇವರಿಗೆ ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಹರಕೆ ಹೊತ್ತುಕೊಳ್ಳುವುದು ಇಲ್ಲಿ ಸಹಜ. ಇದಕ್ಕೆ ಜಾತಿ ಮತ್ತು ಧರ್ಮದ ಹಂಗಿಲ್ಲ. ಬಯಕೆ ಈಡೇರಿಕೆಗಾಗಿ ಮಹಾನವಮಿ ಅಮಾವಾಸ್ಯೆಯಿಂದ ದೀಪಾವಳಿ ಅಮಾವಾಸ್ಯೆಯವರೆಗೂ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಭಕ್ತರು ಉಪವಾಸ ವ್ರತಾಚರಣೆ ನಡೆಸುತ್ತಾರೆ.

ಗ್ರಾಮದ ಪ್ರತಿ ಮನೆಯಲ್ಲಿ ಒಬ್ಬರಾದರೂ ಉಪವಾಸ ವ್ರತ ಆಚರಿಸುತ್ತಾರೆ. ಮುಸ್ಲಿಂ ಧರ್ಮದವರು ಸಹ ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಗವಿಸಿದ್ಧೇಶ್ವರ ದೇವರ ಜಾತ್ರಾ ಸಮಯದಲ್ಲಿ ಉಪವಾಸ ವ್ರತ ಕೈಗೊಳ್ಳುತ್ತಾರೆ. ಉಪವಾಸ ವ್ರತಾಚರಣೆಯನ್ನು ಭಕ್ತರು ಕಟ್ಟುನಿಟ್ಟಿನಿಂದ ಆಚರಿಸುತ್ತಾರೆ. ನಸುಕಿನಲೇ ಚಹಾ ಕುಡಿದರೆ, ಮತ್ತೆ ಏನನ್ನೂ ತಿನ್ನುವುದಿಲ್ಲ. ತುಂಬಾ ದಾಹವಾದರೆ ನೀರನ್ನಷ್ಟೇ ಕುಡಿಯುತ್ತಾರೆ. ರಾತ್ರಿ ಯಷ್ಟೇ ಒಂದು ಹೊತ್ತು ಊಟ ಅಥವಾ ಫಲಾಹಾರ ಸೇವಿಸುತ್ತಾರೆ ಎಂದು ಗ್ರಾಮದ ಗವಿಸಿದ್ಧೇಶ್ವರ ದೇವರ ಆರಾಧಕ  ಜೆ.ಆರ್.ಪೂಜಾರಿ ತಿಳಿಸಿದರು.

ಮಹಾಲಕ್ಷ್ಮೀ ಮತ್ತು ಗವಿಸಿದ್ಧೇಶ್ವರ ದೇವರ ಮುಕ್ತಿ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಒಂದು ತಿಂಗಳ ಉಪವಾಸ ವ್ರತ ಕೈಬಿಟ್ಟರು. ಮುಕ್ತಿ ಮಂದಿರದಲ್ಲಿ ಪ್ರಸಾದ ಸ್ವೀಕರಿಸಿದ ಭಕ್ತರು ಸಂತೃಪ್ತಿ ವ್ಯಕ್ತಪಡಿಸಿದರು. ಮುಕ್ತಿ ಮಂದಿರದಲ್ಲಿ ವಿಶಿಷ್ಟ ಪೂಜೆ ನಡೆದವು. ದೇವರ ನಾಮಸ್ಮರಣೆ, ಡೊಳ್ಳು ಕುಣಿತ, ಭಜನೆ ಸಾಂಸ್ಕೃತಿಕ  ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದ ಅಂಗವಾಗಿ ಸಜ್ಜೆಗಡುಬು, ಬಾಳೆಹಣ್ಣು, ಅಂಬಲಿ ಸಜ್ಜಕವನ್ನು ಸವಿದರು.

ದಸರಾ–ದೀಪಾವಳಿ ನಡುವೆ ವ್ರತಾಚರಣೆ

ವ್ರತಾಚರಣೆಯಲ್ಲಿ ತೊಡಗಿದವರು ಕಾಲಿಗೆ ಪಾದರಕ್ಷೆ ತೊಡಲ್ಲ. ಪಾದರಕ್ಷೆ ಹಾಕಿಕೊಂಡವರು ಅಪ್ಪ ತಪ್ಪಿ ಮುಟ್ಟಿದರೆ ಅಂದು ನೀರನ್ನು ಕುಡಿಯಲ್ಲ. ಮತ್ತೊಮ್ಮೆ ಝಳಕ ಮಾಡಿದ ಬಳಿಕ ದೇವರಿಗೆ ಪೂಜೆ ಸಲ್ಲಿಸಿಯೋ ಮುಂದುವರೆಯಲಿದ್ದಾರೆ ಎಂದು ಹೇಳಿದರು. ಗವಿಸಿದ್ಧೇಶ್ವರನ ಸಂಪ್ರೀತಿಗಾಗಿ ಮಹಾನವಮಿ ಅಮಾವಾಸ್ಯೆಯಿಂದ ದೀಪಾವಳಿ ಅಮಾವಾಸ್ಯೆಯವರೆಗೂ ಕಟ್ಟು ನಿಟ್ಟಿನಿಂದ ವ್ರತಾಚರಣೆ ನಡೆಸಿದ ಭಕ್ತ ಸಮೂಹ ದೀಪಾವಳಿ ಅಮಾವಾಸ್ಯೆಯಂದು ಮುಕ್ತಿ ಮಂದಿರದಲ್ಲಿ ದೇವರ ದರ್ಶನ ಪಡೆದು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ನಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.