ನಾಲತವಾಡ: ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕನ್ನಡ ಮಾಯವಾಗಿದ್ದು, ತಮಿಳು, ಮಲಯಾಳಂ ಭಾಷೆಯಲ್ಲಿ ಬ್ಯಾಂಕ್ ಓಚರ, ರಶೀದಿಗಳನ್ನು ನೀಡುತ್ತಿದ್ದಾರೆ. ಜನರು ಇವುಗಳನ್ನು ಭರ್ತಿ ಮಾಡುವುದಕ್ಕೆ ಪರದಾಡುವ ಸ್ಥಿತಿ ಬಂದೊದಗಿದೆ.
ಪಟ್ಟಣದಲ್ಲಿ ಇರುವ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಕೆನರಾ ಆಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಯಾರಿಗೂ ಕನ್ನಡ ಭಾಷೆ ಓದಲು, ಬರೆಯಲು ಬರುವುದಿಲ್ಲ. ಒಬ್ಬರು ಮಹಿಳಾ ಸಿಬ್ಬಂದಿ ಮಾತ್ರ ಸ್ಥಳೀಯರಾಗಿದ್ದು, ಅವರು ಕೂಡಾ ಬ್ಯಾಂಕ್ ಶಾಖೆಗೆ ಬರುವ ಗ್ರಾಹಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಗ್ರಾಹಕರಿಗೆ ಸರಿಯಾಗಿ ಮಾಹಿತಿ ನೀಡದೆ ಸಿಡಿಮಿಡಿಗೊಳ್ಳುತ್ತಾರೆ. ಹೀಗಾಗಿ ಬ್ಯಾಂಕ್ ಶಾಖೆಗೆ ಬರುವ ಎಲ್ಲ ಗ್ರಾಹಕರು ಸಂಕಷ್ಟ ಎದುರಿಸುತ್ತಿದ್ದಾರೆ.
ಬಹುತೇಕ ಮೊದಲಿನಿಂದಲೂ ಕೆನರಾ ಬ್ಯಾಂಕ್ ಶಾಖೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಕಾರ್ಯನಿರ್ವಹಣೆ ನಡೆಯುತ್ತಿತ್ತು. ಇದೀಗ ಮತ್ತಷ್ಟು ತೊಂದರೆ ನಿರ್ಮಾಣವಾಗಿದೆ. ಬ್ಯಾಂಕ್ ನೌಕರರು ಸ್ಥಳೀಯರ ಜೊತೆ ಕನ್ನಡದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಕನ್ನಡ ಭಾಷೆ ಬಲ್ಲವರೇ ಕರ್ನಾಟಕದ ಬ್ಯಾಂಕ್ ಉದ್ಯೋಗಿಗಳಾಗಬೇಕು ಎನ್ನುವ ಬೇಡಿಕೆ ಇದೆ. ಆದರೆ ಬೇಡಿಕೆ ಇದುವರೆಗೂ ಈಡೇರುತ್ತಿಲ್ಲ.
ಅಪ್ಪಟ ಕನ್ನಡಿಗರು ಇರುವ ನಾಲವತವಾಡ ಬ್ಯಾಂಕ್ ಶಾಖೆಯಲ್ಲಿ ವ್ಯವಹಾರ ನಡೆಯುವುದು ರಾಜ್ಯ , ರಾಷ್ಟ್ರ ಅಥವಾ ಇಂಗ್ಲಿಷ್ ಭಾಷೆಯಲ್ಲಲ್ಲ, ಅನ್ಯ ರಾಜ್ಯಗಳ ಭಾಷೆಯಲ್ಲಿ. ಕನ್ನಡಿಗರು ಅಸಹಾಯಕರಾಗಿ ಬ್ಯಾಂಕ್ ಶಾಖೆಯಲ್ಲಿ ಸೇವೆ ಪಡೆಯುವ ದುಃಸ್ಥಿತಿ ಕೊನೆಗೊಳ್ಳುತ್ತಿಲ್ಲ.
ನಿತ್ಯ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕರ್ನಾಟಕದಲ್ಲಿರುವ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಕಾಗದ, ಪತ್ರ ಹಾಗೂ ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಿ ಅದರಲ್ಲಿ ಬ್ಯಾಂಕಿನ ವಹಿವಾಟುಗಳು ನಡೆಯುವಂತೆ ವ್ಯವಸ್ಥೆ ಮಾಡಬೇಕು ಎನ್ನುವುದು ಪಟ್ಟಣದ ಜನರ ಆಗ್ರಹವಾಗಿದೆ.
ಒಂದು ವಾರದಲ್ಲಿ ಕನ್ನಡದಲ್ಲಿ ವ್ಯವಹಾರದ ರಶೀದಿ ಮುದ್ರಿಸಿ ಗ್ರಾಹಕರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಬ್ಯಾಂಕ್ ಮುಂದೆ ಮುಷ್ಕರ ಹೂಡಲಾಗುವುದುಮಲ್ಲಿಕಾರ್ಜುನ ಗಂಗನಗೌಡ್ರ. ಕರವೇ ಮುದ್ದೇಬಿಹಾಳ ತಾಲ್ಲೂಕು ಘಟಕದ ಅಧ್ಯಕ್ಷ
ಅವಿದ್ಯಾವಂತರಾದ ನಮಗೆ ಕನ್ನಡವೇ ಓದಲು ಬರೆಯಲು ಬರುವುದಿಲ್ಲ. ತಮಿಳು ಮಲಯಾಳಿ ಭಾಷೆಯಲ್ಲಿ ಓಚರ್ ಹೇಗೆ ಭರ್ತಿ ಮಾಡಬೇಕು?ಅಡಿವೆಪ್ಪ ಕೆಂಭಾವಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.