ಆಲಮೇಲ: ಭೀಮಾ ನದಿ ತೀರದಲ್ಲಿ ಪ್ರವಾಹ ಹೆಚ್ಚುತ್ತಿದ್ದು ಎರಡು ದಿನಗಳಿಂದ ತಾರಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಹಲವು ದಿನಗಳಿಂದ ನಿರಂತರವಾಗಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನದಿತೀರದ ಗ್ರಾಮಗಳಾದ ದೇವಣಗಾಂವ, ತಾವರಖೇಡ, ಬ್ಯಾಡಗಿಹಾಳ, ಕುಮಸಗಿ, ಶೇಂಬೆವಾಡ, ಕಡ್ಲೆವಾಡ, ಶಿರಸಗಿ ಗ್ರಾಮಕ್ಕೆ ನೀರು ಆವರಿಸಿ ಕೆಲ ಮನೆಗಳಿಗೆ ನೀರು ಸುತ್ತುವರೆದು ಜಲಾವೃತಗೊಂಡಿದೆ.
ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ತಾರಾಪೂರ, ತಾವರಖೇಡ, ಕುಮಸಗಿ ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ನದಿ ತೀರದ ಜನರು, ಜಮೀನುಗಳಲ್ಲಿ ವಾಸವಾಗಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ.
ಶುಕ್ರವಾರ ಆಲಮೇಲ ತಹಶೀಲ್ದಾರ್ ಧನಪಾಲಶೆಟ್ಟಿ ದೇವೂರ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕುಮಸಗಿ ಗ್ರಾಮದಲ್ಲಿ ಸಂಚರಿಸಿ, ನದಿ ಪ್ರವಾದಿಂದ ಉಂಟಾದ ಸಮಸ್ಯೆಗಹಳು ಆಲಿಸಿ, ಸ್ಥಳೀಯ ಗ್ರಾಮ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು ಯಾವುದೆ ಸಮಸ್ಯೆ ಆಗದಂತೆ ನಿಗಾವಹಿಸಿದ್ದಾರೆ. ಹಾನಿಗೊಳಗಾದ ಮನೆ ಮತ್ತು ಬೆಳೆಗಳ ಸಮೀಕ್ಷೆ ಮಾಡಿ ವರದಿ ನೀಡುವಂತೆ ತಿಳಿಸಿದರು.
ನಡುಗಡ್ಡೆಯಾದ ತಾರಾಪುರ
ಆಲಮೇಲ ತಾಲ್ಲೂಕಿನ ಹಳೆ ತಾರಾಪುರ ಗ್ರಾಮವನ್ನು ಸುತ್ತುವರೆದಿರುವ ಭೀಮಾನದಿಯ ನೀರು ಗ್ರಾಮವನ್ನು ಸಂಪೂರ್ಣ ನಡುಗಡ್ಡೆಯನ್ನಾಗಿಸಿದೆ. ಹೊಸ ತಾರಾಪೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ತಾರಾಪೂರ ಗ್ರಾಮಕ್ಕೆ ಆಲಮೇಲ ತಹಶೀಲ್ದಾರ್ ಧನಪಾಲ ಶೆಟ್ಟಿ, ಎ.ಎಂ.ಅತ್ತಾರ ಕಡಣಿ ಗ್ರಾಮ ಪಂಚಾಯಿತಿಯ ಪಿಡಿಒ ಶರಣಗೌಡ ಕಡ್ಲೆವಾಡ, ತಾರಾಪೂರ ಗ್ರಾಮಸಹಾಯಕ ಮಡಿವಾಳಪ್ಪ ಬಿರಾದಾರ ಭೇಟಿ ನೀಡಿದರು.
ಕಾಳಜಿ ಕೇಂದ್ರಗಳನ್ನು ದೇವಣಗಾಂವ ಮತ್ತು ಕುಮಸಗಿ ಗ್ರಾಮಗಳಲ್ಲೂ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.
ತಾವರಖೇಡ ಗ್ರಾಮದಲ್ಲಿ ಸುಮಾರು 5 ರಿಂದ 6 ಮನೆಗಳಿಗೆ ನುಗ್ಗಿರುವ ನೀರು ಕೆಲವು ಜನರು ಅಲ್ಲಿಂದ ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. ಹಳೆ ಬ್ಯಾಡಗಿಹಾಳ ಗ್ರಾಮದಲ್ಲಿ ನೀರು ನುಗ್ಗಿದೆ. ದೇವಣಗಾಂವ ಗ್ರಾಮದ ಹನುಮಾನ ದೇವಸ್ಥಾನದ ಆವರಣವನ್ನು ನೀರು ಸುತ್ತುವರಿದಿದ್ದು ಜನವಸತಿ ಸಮೀಪ ನೀರು ಆವರಿಸುತ್ತದೆ. ಕುಮಸಗಿ ಗ್ರಾಮದಲ್ಲಿ ಸುಮಾರು 20 ಮನೆಗಳಿಗೆ ನೀರು ನುಗ್ಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.