ADVERTISEMENT

‘ಶಿಕ್ಷಕರು ಸ್ಮಾರ್ಟ್‌ ಆಗಬೇಕು’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 12:49 IST
Last Updated 5 ಫೆಬ್ರುವರಿ 2019, 12:49 IST
ಮೇಜರ್ ಸಿದ್ಧಲಿಂಗಯ್ಯ ಹಿರೇಮಠ
ಮೇಜರ್ ಸಿದ್ಧಲಿಂಗಯ್ಯ ಹಿರೇಮಠ   

ಆಲಮಟ್ಟಿ: ‘ಶಿಕ್ಷಕರ ಕೈಯಲ್ಲಿ ಮಾನವೀಯತೆ, ಭಾರತದ ಭವಿಷ್ಯ ನಿರ್ಮಿಸುವ ಜವಾಬ್ದಾರಿಯಿದೆ. ಇದಕ್ಕಾಗಿ ಓಬಿರಾಯನ ಕಾಲದ ಬೋಧನಾ ಪದ್ಧತಿಗೆ ಗುಡ್‌ಬೈ ಹೇಳಿ, ಶಿಕ್ಷಣ ಸಂಬಂಧಿ ಸಾಮಾಜಿಕ ಜಾಲ ತಾಣ, ಅಂತರ್ಜಾಲ ಬಳಕೆಯಿಂದ ಶಾಲಾ ವಾತಾವರಣವನ್ನು ಸ್ಮಾರ್ಟ್‌ ಮಾಡಬೇಕು. ಅದಕ್ಕೆ ತಕ್ಕಂತೆ ಶಿಕ್ಷಕರು ಸ್ಮಾರ್ಟ್‌ ಆಗಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಡಾ.ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಇಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಶಿಕ್ಷಣ ಸಾಹಿತ್ಯ ಸಮ್ಮೇಳನದ ಎರಡನೇ ದಿನದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಶಿಕ್ಷಕರು ಕನಿಷ್ಠ ಕಲಿಕಾ ಉಪಕರಣಗಳೊಂದಿಗೆ ತರಗತಿಗೆ ಹೋಗಬೇಕಿದೆ. 100ಕ್ಕೂ ಹೆಚ್ಚು ಶಾಲೆಗಳನ್ನು ಸಂದರ್ಶಿಸಿದಾಗ ಒಂದೆರೆಡು ಶಾಲೆ ಹೊರತುಪಡಿಸಿ ಉಳಿದೆಲ್ಲಾ ಶಾಲೆಗಳಲ್ಲಿ ಕಲಿಕೋಪಕರಣಗಳ ಬಳಕೆಯೇ ಆಗಿಲ್ಲ. ಶಿಕ್ಷಕರು ಮೊಬೈಲ್‌ ಅನ್ನು ಬೇಡದ ಚಟುವಟಿಕೆಗಳಿಗೆ ಬಳಕೆ ಮಾಡುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಶಿಕ್ಷಣ ಸಂಬಂಧಿಸಿದ ಹಲವಾರು ವಿಡಿಯೊಗಳು ಆನ್‌ಲೈನ್‌ನಲ್ಲಿ ಲಭ್ಯವಿವೆ. ಅವುಗಳನ್ನು ಮಕ್ಕಳಿಗೆ ತೋರಿಸಿ, ಕಲಿಕಾ ಚಟುವಟಿಕೆಯ ಚೈತನ್ಯ ಮೂಡಿಸಬೇಕಿದೆ ಎಂದರು.

ಫೇಸ್ ಬುಕ್ ಖಾತೆ: ಧಾರವಾಡ ಆಯುಕ್ತರ ಕಚೇರಿ ವತಿಯಿಂದ ಶೀಘ್ರವೇ ಪ್ರತಿ ವಿಷಯದ ಫೇಸ್‌ಬುಕ್‌ ಪೇಜ್ ತೆರೆಯಲಾಗುವುದು. ಅಲ್ಲಿ ಶಿಕ್ಷಕರು ತಾವು ಕಲಿಸುತ್ತಿರುವ ವಿಷಯದ ಬಗ್ಗೆ, ವಿಡಿಯೊ, ಸಮಸ್ಯೆ ಬಗ್ಗೆ ಶೇರ್ ಮಾಡಲು ಅನುಕೂಲವಾಗಲಿದೆ. ಕಲಿಕೋಪಕರಣಗಳ ರಚನೆ ಹಾಗೂ ಬಳಕೆಯ ಕೌಶಲ ಅಗತ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.