
ಬಸವನಬಾಗೇವಾಡಿ: ‘ಐತಿಹಾಸಿಕ ಬುತ್ತಿ ಬಸವೇಶ್ಚರ ದೇವಸ್ಥಾನದ ಅಭಿವೃದ್ಧಿಗೆ ಸಂಸದರ ನಿಧಿಯಿಂದ ₹10 ಲಕ್ಷ ಅನುದಾನದ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಪಟ್ಟಣದ ಹೊರವಲಯದ ಬಸವನಹಟ್ಟಿ ಕ್ರಾಸ್ ಬಳಿಯ ಬುತ್ತಿ ಬಸವೇಶ್ವರ ದೇವಸ್ಥಾನದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅವರು ಮಾತನಾಡಿ, ‘ಬಸವಣ್ಣನವರು ಇಲ್ಲಿ ಬಂದು ಬುತ್ತಿ ಸೇವಿಸಿ ಹೋದರು ಎಂಬ ಪ್ರತೀತಿ ಇದೆ. ಕೊಟ್ರಶೆಟ್ಟಿ ಪರಿವಾರದವರು ತಲತಲಾಂತರದಿಂದ ಈ ದೇವಸ್ಥಾನಕ್ಕೆ ಭಕ್ತಿಸೇವೆ ಮಾಡುತ್ತಾ ಬಂದಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ ಮನಗೂಳಿ ಮಾತನಾಡಿ, ‘ಬಸವಣ್ಣನವರ ಜನ್ಮಸ್ಥಳ ಸೇರಿ ಅವರು ಸಂಚರಿಸಿದ ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ಸ್ವಚ್ಛತೆ, ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಭವಿಷ್ಯದಲ್ಲಿ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಅದ್ದೂರಿ ಜಾತ್ರೋತ್ಸವ ಮಾದರಿಯಂತೆ ಬುತ್ತಿ ಬಸವೇಶ್ವರ ದೇವಸ್ಥಾನದ ಉತ್ಸವವು ನಡೆಯುವಂತಾಗಿ, ಎಲ್ಲರಿಗೂ ಎಂದಿಗೂ ಬುತ್ತಿ ಸಿಗುವಂತಾಗಲಿ’ ಎಂದು ಹಾರೈಸಿದರು.
ಯುವ ಮುಖಂಡ ಸತ್ಯಜೀತ ಶಿವಾನಂದ ಪಾಟೀಲ ಮಾತನಾಡಿ, ‘ಬಸವೇಶ್ವರರ ತತ್ವ, ವಿಚಾರಧಾರೆಗಳನ್ನು ವಿಶ್ವದಾದ್ಯಂತ ಸಾರುವ ಕೆಲಸ ಮಾಡಬೇಕು. ಕೊಟ್ರಶೆಟ್ಟಿ ಮನೆತನದವರಂತೆ ನಾವೆಲ್ಲರೂ ಕಾಯಕ, ದಾಸೋಹ ತತ್ವ ಪಾಲಿಸಿ ಧರ್ಮಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯ ಮಾಡಿದರೆ ಇಲ್ಲೇ ಸ್ವರ್ಗ ಕಾಣುತ್ತೇವೆ’ ಎಂದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ಆಗಿರುವ ಕಾರಣ ಈ ಐತಿಹಾಸಿಕ ಬುತ್ತಿ ಬಸವೇಶ್ವರ ದೇವಸ್ಥಾನವನ್ನು ಸಹ ಈ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿ ಮುಂಬರುವ ಪೀಳಿಗೆಗೆ ಪರಿಚಯ ಮಾಡಿಕೊಡುವ ಕಾರ್ಯವಾಗಬೇಕು ಎಂದರು.
ಹಿರಿಯ ಸಾಹಿತಿ ಲ.ರು.ಗೊಳಸಂಗಿ ಹಾಗೂ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ಶಿವಾನಂದ ಈರಕಾರ ಮುತ್ಯಾ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ, ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ, ಹಿರಿಯರಾದ ಲೋಕನಾಥ ಅಗರವಾಲ, ಬಸವರಾಜ ಹಾರಿವಾಳ, ಸಿದ್ದಪ್ಪ ಹಿರೇಕುರುಬರ, ಸುರೇಶ ಹಾರಿವಾಳ, ಗಂಗಾಧರ ಕುಂಟೋಜಿ, ಸಂಗಪ್ಪ ವಾಡೇದ, ನಿವೃತ್ತ ಸೈನಿಕರಾದ ಸಂಗಣ್ಣ ಕೊಟ್ರಶೆಟ್ಟಿ, ಬುತ್ತಿ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಶ್ರೀಕಾಂತ್ ಕೊಟ್ರಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.