ವಿಜಯಪುರ: ಬೇಸಿಗೆಯಲ್ಲಿ ಮಾತ್ರ ಕಾಣಸಿಗುವ ಮಾವಿನ ಹಣ್ಣು ಇದೀಗ ‘ದ್ರಾಕ್ಷಿ ನಾಡು’ ವಿಜಯಪುರ ಜಿಲ್ಲೆಯ ಶಿವಣಗಿ ಗ್ರಾಮದ ರೈತ ನವೀನ ರಾವುತಪ್ಪ ಮಂಗಾನವರ ಅವರ ಏಳು ಎಕರೆ ತೋಟದಲ್ಲಿ ವರ್ಷಪೂರ್ತಿ ಸಿಗುತ್ತದೆ.
2011ರ ಡಿಸೆಂಬರ್‌ನಲ್ಲಿ ನವೀನ ಥಾಯ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಚಳಿಗಾಲದಲ್ಲಿ ವೈವಿಧ್ಯ ಗಾತ್ರ, ಬಣ್ಣ, ಸ್ವಾದದ ಮಾವಿನ ಹಣ್ಣು ಕಂಡು ಅಚ್ಚರಿಗೊಂಡಿದ್ದರು. ತಮ್ಮೂರಿಗೆ ತಂದು ಬೆಳೆಯಲು ಬಯಸಿದರು. ಅದಕ್ಕಾಗಿ ಸತತ 7 ವರ್ಷ ಬೇರೆ ಬೇರೆ ಋತುಮಾನದಲ್ಲಿ ಥಾಯ್ಲೆಂಡ್‌ಗೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದರು. ವರ್ಷಪೂರ್ತಿ ಇಳುವರಿ ಕೊಡುವ ಮಾವಿನ ಕೃಷಿ ಪದ್ಧತಿ ಬಗ್ಗೆ ಮಾಹಿತಿ ಸಂಗ್ರಹಿಸಿ, ಇಲ್ಲಿ ಅನುಷ್ಠಾನಕ್ಕೆ ತಂದರು.
‘ವರ್ಷಪೂರ್ತಿ ಇಳುವರಿ ಕೊಡುವ ಥಾಯ್ಲೆಂಡ್ ಮೂಲದ 3 ಸಾವಿರ ಮಾವಿನ ಸಸಿಗಳನ್ನು (ಪ್ರತಿ ಗಿಡಕ್ಕೆ ₹350) 2021ರಲ್ಲಿ ತಂದು ತೋಟದಲ್ಲಿ ನಾಟಿ ಮಾಡಿದೆ. ಹೊಸ ಮಣ್ಣು ಮತ್ತು ಹವಾಮಾನ ಸ್ಥಿತಿಗೆ ಹೊಂದಿಕೊಳ್ಳಲಾಗದೇ ಸಾಕಷ್ಟು ಸಸಿಗಳು ಒಣಗಿದವು. ಆದರೆ, ಧೈರ್ಯ ಕಳೆದುಕೊಳ್ಳಲಿಲ್ಲ. ರಾಸಾಯನಿಕ ಗೊಬ್ಬರದ ಬದಲು ಹಸುವಿನ ಸಗಣಿ ಮತ್ತು ಎರೆಹುಳು ಗೊಬ್ಬರವನ್ನು ಹಾಕಿದೆ. ಬದುಕುಳಿದ ಸಸಿಗಳನ್ನು ತಾಳ್ಮೆ ಮತ್ತು ಕಾಳಜಿಯಿಂದ ಪೋಷಿಸಿದೆ’ ಎಂದು ರೈತ ನವೀನ ಮಂಗಾನವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದೂವರೆ ವರ್ಷದಲ್ಲಿ ಇಳುವರಿ ಆರಂಭಗೊಂಡಿತು. ಪ್ರತಿ ಗಿಡದಲ್ಲಿ ಹಣ್ಣುಗಳ ಬಣ್ಣ, ಗಾತ್ರ, ಸ್ವಾದವನ್ನು ಸತತ ಐದು ವರ್ಷ ಅವಲೋಕಿಸಿದೆ. ಗರಿಷ್ಠ ಗುಣಮಟ್ಟ ಹಾಗೂ ಆಕರ್ಷಣೆಯ ತಳಿಯನ್ನು ಉಳಿಸಿಕೊಂಡು ಬಂದೆ. ಸ್ವಾದ ರಹಿತ ಗಿಡಗಳನ್ನು ಕಿತ್ತು ಹಾಕಿ ಗುಣಮಟ್ಟದ ಉತ್ಕೃಷ್ಟತೆಗೆ ಆದ್ಯತೆ ನೀಡಿದೆ’ ಎಂದು ತಿಳಿಸಿದರು.
‘ಸದ್ಯ 4–5 ಅಡಿ ಎತ್ತರದ ಪ್ರತಿ ಮರ ಕನಿಷ್ಠ ಎರಡು ಡಜನ್ ಹಣ್ಣು ನೀಡುತ್ತವೆ. ಅವು ಪಕ್ವ ಆದಂತೆ ಇಳುವರಿ ಪ್ರತಿ ಮರಕ್ಕೆ 6–7 ಡಜನ್ ಹಣ್ಣು ಹೆಚ್ಚಾಗುತ್ತದೆ’ ಎಂದರು.
‘ಪ್ರತಿದಿನ 25 ಡಜನ್ ಮಾವಿನ ಹಣ್ಣುಗಳನ್ನು ಕೊಯ್ಲು ಮಾಡುತ್ತಿದ್ದೇನೆ. ಮರದಲ್ಲೇ ನೈಸರ್ಗಿಕವಾಗಿ ಹಣ್ಣಾಗಲು ಬಿಡುತ್ತಿದ್ದು, ರುಚಿ, ಮಾಧುರ್ಯ, ಸುವಾಸನೆ ಹೆಚ್ಚಿದೆ. ಸಗಟು ಮಾರುಕಟ್ಟೆಗೆ ಬದಲಾಗಿ ಗ್ರಾಹಕರಿಗೆ ನೇರವಾಗಿ ಮಾರುತ್ತೇನೆ’ ಎಂದರು.
‘ಮಾವಿನ ಗಿಡಗಳಿಗೆ ಎರೆಹುಳು ಗೊಬ್ಬರ, ತಾಪಮಾನ ತಡೆಯಲು ಪಾಚಿ ಮುಚ್ಚಿಗೆ, ಚಳಿ ತಡೆಯಲು ಪಾರಿವಾಳದ ಹಿಕ್ಕೆ, ಸಾವಯವ ಬೆಲ್ಲ, ಕಡಲೆ ಹಿಟ್ಟನ್ನು ಗೋಮೂತ್ರದಲ್ಲಿ ಬೆರೆಸಿ ಹಾಕುತ್ತಿದ್ದೇನೆ’ ಎಂದರು.
ಥಾಯ್ಲೆಂಡ್ ಮಾವಿನ ಹಣ್ಣಿಗೆ ವರ್ಷವಿಡೀ ಡಜನ್‌ಗೆ ₹1200 ದರ ನಿಗದಿಪಡಿಸಿದ್ದೇನೆ. ಈ ವರ್ಷ ₹10 ಲಕ್ಷ ಆದಾಯ ಗಳಿಸಿದ್ದೇನೆ.ನವೀನ ರಾವುತಪ್ಪ ಮಂಗಾನವರ ಥಾಯ್ಲೆಂಡ್ ಮಾವು ಬೆಳೆಗಾರ
‘ಮಾವು ಕೃಷಿಯಷ್ಟೇ ಅಲ್ಲ...’
ಥಾಯ್ಲೆಂಡ್ ಮಾವಿನ ಜೊತೆಗೆ ವಿಯಾಟ್ನಾಂ ಹಲಸು (100 ಗಿಡ) ಜಪಾನಿನ ಮಿಯಾ ಜಾಕಿ ಮಾವು (40) ಗೇರು ಹಣ್ಣಿನ ಗಿಡಗಳು(5) ಹಿಮಾಚಲ ಪ್ರದೇಶದ ಎಚ್‌ಆರ್‌ಎಂಎನ್ 99 ತಳಿಯ ಮಾವು(15) ನೇರಳೆ (100) ಸಂತ್ರ (25) ಥಾಯ್ಲೆಂಡ್ ಚಿಕ್ಕು (25) ಆ್ಯಪಲ್ ಪೇರು (10) ಸೇರಿದಂತೆ ವಿವಿಧ ಹಣ್ಣಿನ ಗಿಡಗಳನ್ನು ರೈತ ನವೀನ ಬೆಳೆಸಿದ್ದಾರೆ. ಮಾಹಿತಿಗೆ ನವೀನ್ ಅವರ ಮೊಬೈಲ್ ನಂ. 9538234899 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.