ವಿಜಯಪುರ: ಪೊಲೀಸರಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಕೇರಿ ತಾಂಡಾ 1ರಲ್ಲಿ ಜನವರಿ 28ರಂದು ಸತೀಶ ರಾಠೋಡ ಎಂಬಾತನನ್ನು ಶೂಟೌಟ್ ಮಾಡಿ ಕೊಲೆಗೈದಿದ್ದ ಅದೇ ತಾಂಡದ ರಮೇಶ ಲಮಾಣಿ(35) ಸೇರಿದಂತೆ ಹಂಚನಾಳ ತಾಂಡ ನಂ.1ರ ಸುಭಾಸ ಚವ್ಹಾಣ(33), ವಿಜಯ ರಾಠೋಡ(54), ರಾಮು ರಾಠೋಡ(40) ಮತ್ತು ಲಕ್ಷ್ಮಣ ರಾಠೋಡ(42) ಎಂಬಾತನ್ನು ಈಗಾಗಲೇ ಬಂಧಿಸಲಾಗಿತ್ತು. ಈ ಪ್ರಕರಣದ ಮುಖ್ಯ ಆರೋಪಿ ರಮೇಶ ಲಮಾಣಿಗೆ ಕಂಟ್ರಿ ಪಿಸ್ತೂಲ್ ಒದಗಿಸಿದ್ದ ಹಂಚಿನಾಳ ತಾಂಡಾ ನಂ.1ರ ಆರೋಪಿ ಸಾಗರ ಅಲಿಯಾಸ್ ಸುರೇಶ ರಾಠೋಡ ತಲೆ ಮರೆಸಿಕೊಂಡಿದ್ದನು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ತಲೆ ಮರೆಸಿಕೊಂಡು ಸುತ್ತಾಡುತ್ತಿದ್ದ ಆರೋಪಿ ಸಾಗರ ರಾಠೋಡ ಬುಧವಾರ ನಸುಕಿನ ಜಾವ 5.20ರ ಸುಮಾರಿಗೆ ತೊರವಿ ತಾಂಡಾಕ್ಕೆ ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಬಂಧಿಸಲು ತನಿಖಾ ತಂಡವು ತೆರಳಿತ್ತು. ಆರೋಪಿಯು ಲಾರಿಯೊಂದರಲ್ಲಿ ಬಂದು ಇಳಿಯುತ್ತಿದ್ದಂತೆ ಪೊಲೀಸರು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆತನನ್ನು ಬೆನ್ನಟ್ಟಿದಾಗ ಚಾಕುವಿನಿಂದ ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ವಿಜಯಪುರ ಗ್ರಾಮೀಣ ಪಿಎಸ್‌ಐ ವಿನೋದ ದೊಡಮನಿ ಆತ್ಮ ರಕ್ಷಣೆಗಾಗಿ ಆರೋಪಿತನ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.
ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಆರೋಪಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.
ಕೊಲೆ ಆರೋಪಿ ರಮೇಶ ಲಮಾಣಿಯ ಮಗಳಾದ ಕಾವೇರಿಯನ್ನು ಮದುವೆ ಮಾಡಿಕೊಡುವಂತೆ ಈ ಹಿಂದೆ ಸತೀಶ ರಾಠೋಡ ಕೇಳಿದ್ದು, ಅದಕ್ಕೆ ಆರೋಪಿ ರಮೇಶ ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದನು. ಕೆಲ ದಿನಗಳ ಬಳಿಕ ಇದೇ ವಿಷಯವಾಗಿ ಕಾವೇರಿ ಬಾವಿಗೆ ಹಾರಿ ಸಾವಿಗೀಡಾಗಿದ್ದಳು. ಮಗಳ ಸಾವಿಗೆ ಸತೀಶನೇ ಕಾರಣ ಎಂದು ಸಿಟ್ಟಾಗಿದ್ದ ರಮೇಶ ಲಮಾಣಿ ಜನವರಿ 28ರಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಎದೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದನು ಎಂದು ಎಸ್‌ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.