ತಾಳಿಕೋಟೆ: ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಘಟಕ ಹಾಗೂ ಕಲಕೇರಿ ಗ್ರಾಮ ಘಟಕದ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಮಂಗಳವಾರವೂ ಮುಂದುವರಿಯಿತು.
‘ಕಲಕೇರಿ ಭಾಗದ ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು. ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಲಕೇರಿ ಸುತ್ತಲಿನ ಅಸ್ಕಿ, ಹುಣಶಾಳ, ಬೂದಿಹಾಳ ಕೆರೆಗಳಿಗೂ ನೀರು ತುಂಬಿಸಬೇಕು. ಬೂದಿಹಾಳ–ಪೀರಾಪೂರ ಏತ ನೀರಾವರಿಯಡಿ ರೈತರಿಗೆ ಪರಿಹಾರ ನೀಡಬೇಕು. ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಈ ಕಾಮಗಾರಿಗಾಗಿ ಅಗೆದಿರುವ ಸಿಸಿ ರಸ್ತೆ ದುರಸ್ತಿಯಾಗಬೇಕು’ ಎಂದು ಧರಣಿನಿರತರು ಆಗ್ರಹಿಸಿದರು.
‘ಕೃಷಿ ಕೆಲಸಗಳಿಗೆ ನಿತ್ಯ 7 ತಾಸು 3 ಪೇಸ್ ಹಾಗೂ ರಾತ್ರಿ 2 ಪೇಸ್ ವಿದ್ಯುತ್ ನೀಡಬೇಕು. ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ, ಪ್ರತಿ ತಿಂಗಳು ಸಮಪರ್ಕವಾಗಿ ವೇತನ ನೀಡಬೇಕು. ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಕೆಲಸ ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಕಲಕೇರಿಯಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಪ್ರಾರಂಭಿಸಬೇಕು. ಜನ ವಸತಿ ಪ್ರದೇಶದಿಂದ ಮದ್ಯ ಮಾರಾಟ ಅಂಗಡಿ ಸ್ಥಳಾಂತರಿಸಬೇಕು. ಮಟ್ಕಾ ಮತ್ತು ಮದ್ಯ ಅಕ್ರಮ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಮಸಳಿ ಅವರು ಸೋಮವಾರ ಪ್ರತಿಭಟನಕಾರರನ್ನು ಭೇಟಿಯಾಗಿ ಮನೊಲಿಸಲು ಯತ್ನಿಸಿದರು. ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಪ್ರತಿಭಟನಕಾರರು ಪಟ್ಟುಹಿಡಿದರು.
ಯಮನೂರಿ ಸಿಂದಗಿರಿ, ಪ್ರಕಾಶ ನಾಟಿಕಾರ, ಬಸವರಾಜ ಗುಡಸಲಮನಿ, ಆನಂದ ಹೊಸಮನಿ, ಸೋಮು ಹೊಸಮನಿ, ದೇವಿಂದ್ರ ವಡ್ಡರ, ಸಿದ್ದು ರಾಯಣ್ಣವರ, ವೈ.ಸಿ. ಮಯೂರ, ಸಂತೋಷ ಮನಗೇರಿ, ಪರಶುರಾಮ ಬ್ಯಾಕೋಡ, ಸೋಮಶೇಖರ ಬಡಿಗೇರ, ಯಮನೂರಿ ಸಿಂಧಗಿರಿ, ಮಲ್ಲಪ್ಪ ನಡುವಿನಕೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.