ADVERTISEMENT

ಖಾಸಗಿ ಆಸ್ಪತ್ರೆಗಳ ಮುಷ್ಕರ; ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 11:14 IST
Last Updated 11 ಡಿಸೆಂಬರ್ 2020, 11:14 IST
ವಿಜಯಪುರದಲ್ಲಿ ಖಾಸಗಿ ಆಸ್ಪತ್ರೆ ಬಾಗಿಲು ಬಂದ್‌ ಮಾಡಲಾಗಿತ್ತು–ಪ್ರಜಾವಾಣಿ ಚಿತ್ರ
ವಿಜಯಪುರದಲ್ಲಿ ಖಾಸಗಿ ಆಸ್ಪತ್ರೆ ಬಾಗಿಲು ಬಂದ್‌ ಮಾಡಲಾಗಿತ್ತು–ಪ್ರಜಾವಾಣಿ ಚಿತ್ರ   

ವಿಜಯಪುರ: ಕೇಂದ್ರ ಸರ್ಕಾರವು ಆಯುರ್ವೇದ ವೈದ್ಯರಿಗೆ ಕೆಲವು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದನ್ನು ವಿರೋಧಿಸಿ ಭಾರತೀಯ ವೈದ್ಯರ ಸಂಘ ದೇಶದಾದ್ಯಂತ ಶುಕ್ರವಾರ ಕರೆ ನೀಡಿದ್ದ ಒಪಿಡಿ ಬಂದ್‌ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ 500ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಂಗಳಲ್ಲಿ ಹೊರರೋಗಿ ವಿಭಾಗ(ಒಪಿಡಿ) ಸೇವೆ ಬಂದ್‌ ಮಾಡಿ, ಮುಷ್ಕರ ನಡೆಸಲಾಯಿತು. ಇದರಿಂದಾಗಿ ರೋಗಿಗಳು, ಅದರಲ್ಲೂ ಗ್ರಾಮೀಣ ಪ್ರದೇಶದ ಜನ ತೊಂದರೆ ಅನುಭವಿಸಿದರು.ಕೋವಿಡ್‌ ಮತ್ತು ತುರ್ತು ಚಿಕಿತ್ಸೆ, ಒಳರೋಗಿ ವಿಭಾಗದ ಸೇವೆ ಎಂದಿನಂತೆ ಇತ್ತು.

ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ ಆಗಿದ್ದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚು ಕಂಡುಬಂದಿತು. ದೂರದ ಊರುಗಳಿಂದ ಬಂದಿದ್ದ ರೋಗಿಗಳು ಪರದಾಡುವಂತಾಯಿತು.

ADVERTISEMENT

ಹಿಂಪಡೆಯಲು ಆಗ್ರಹ:

ಮುಷ್ಕರ ಕುರಿತು ಮಾತನಾಡಿದ ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಸಂತೋಷ ನಂದಿ ಹಾಗೂ ಕಾರ್ಯದರ್ಶಿ ಡಾ.ಮೊಹಮ್ಮದ್‌ ಸಿದ್ದಿಕ್‌, ಆಯುರ್ವೇದಿಕ್‌ ವೈದ್ಯರಿಗೆ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿರುವುದರಿಂದ ರೋಗಿಗಳಿಗೆ ಅನುಕೂಲವಾಗುವ ಬದಲು ಅನಾನುಕೂಲ ಮತ್ತು ಅಪಾಯವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಪೆಂಡಿಕ್ಸ್‌, ಪಿತ್ತಕೋಶ, ಹಾನಿಕಾರಕವಲ್ಲದ ಗಡ್ಡೆ ತೆಗೆಯುವುದು, ಗ್ಯಾಂಗ್ರಿನ್‌, ಹಲ್ಲಿನ ರೂಟ್‌ಕೆನಾಲ್ ಸೇರಿದಂತೆ ಇನ್ನಿತರ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ನೀಡಿರುವಅನುಪತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ನೀಡಿರುವ ಅನುಮತಿಯನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.