ADVERTISEMENT

ಸೋಲಾಪುರ | ಕನ್ನಡ ಸಾಹಿತ್ಯ ಉಳಿಸುವ ಕಾರ್ಯ ಶ್ಲಾಘನೀಯ: ಶಿವಾನಂದ ತಡವಳ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:27 IST
Last Updated 5 ಆಗಸ್ಟ್ 2025, 8:27 IST
ಸೋಲಾಪುರ ಅನುರಾಧಾ ಕನ್ನಡ ಸಂಚಾರಿ ವಾಚನಾಲಯ ಆಯೋಜಿಸಿದ ನಾಡಹಬ್ಬ ಹಾಗೂ ಕನ್ನಡ ಮಾಸ ಪತ್ರಿಕೆಗಳ ಒಳನೋಟ ಕಾರ್ಯಕ್ರಮದಲ್ಲಿ ಅಹಿಲ್ಯಾದೇವಿ ಹೋಳಕರ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ತಡವಳ ಮಾತನಾಡಿದರು
ಸೋಲಾಪುರ ಅನುರಾಧಾ ಕನ್ನಡ ಸಂಚಾರಿ ವಾಚನಾಲಯ ಆಯೋಜಿಸಿದ ನಾಡಹಬ್ಬ ಹಾಗೂ ಕನ್ನಡ ಮಾಸ ಪತ್ರಿಕೆಗಳ ಒಳನೋಟ ಕಾರ್ಯಕ್ರಮದಲ್ಲಿ ಅಹಿಲ್ಯಾದೇವಿ ಹೋಳಕರ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ತಡವಳ ಮಾತನಾಡಿದರು   

ಸೋಲಾಪುರ: ಕರ್ನಾಟಕದ ಗಡಿಭಾಗವಾಗಿರುವ ಸೋಲಾಪುರದಲ್ಲಿ ಅನುರಾಧ ಕನ್ನಡ ಸಂಚಾರಿ ವಾಚನಾಲಯದ ಮೂಲಕ ಡಿ.ಬಿ. ಹೆಬ್ಬಾಳ ತಮ್ಮ ಸಂಚಾರಿ ವಾಚನಾಲಯದ ಸದಸ್ಯರಿಗೆ ಕನ್ನಡ ಮಾಸ ಪತ್ರಿಕೆಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಮಾತೃಭಾಷೆ ಕನ್ನಡದ ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸಿ, ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸೋಲಾಪುರ ಅಹಿಲ್ಯಾದೇವಿ ಹೋಳಕರ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಾನಂದ ತಡವಳ ಹೇಳಿದರು.

ನಗರದ ಸಮಾಜ ಕಲ್ಯಾಣ ಕೇಂದ್ರದಲ್ಲಿ ಅನುರಾಧ ಕನ್ನಡ ಸಂಚಾರಿ ವಾಚನಾಲಯ ಈಚೆಗೆ ಆಯೋಜಿಸಿದ್ದ ನಾಡಹಬ್ಬ ಹಾಗೂ ಕನ್ನಡ ಮಾಸ ಪತ್ರಿಕೆಗಳ ಒಳನೋಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಯದೇವಿತಾಯಿ ಲಿಗಾಡೆ  ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದರೂ ಸಹ ತಮ್ಮ ಮಾತೃಭಾಷೆಯಾದ ಕನ್ನಡವನ್ನು ಅದರ ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸುವುದರ ಜೊತೆಗೆ ಅಭಿವೃದ್ಧಿಪಡಿಸಬೇಕೆಂಬ ವಿಚಾರಧಾರೆಯನ್ನು ಇಟ್ಟುಕೊಂಡು ಈ ಭಾಗದಲ್ಲಿ ಮೊದಲು ಕನ್ನಡದ ಕುರಿತು ಕನ್ನಡಿಗರಲ್ಲಿ ಜಾಗೃತಿ ಉಂಟು ಮಾಡಿದ್ದರು. ಅದನ್ನು ನಗರದ ಅನುರಾಧ ಕನ್ನಡ ಸಂಚಾರಿ ವಾಚನಾಲಯದ ಸಂಚಾಲಕ ಡಿ.ಬಿ. ಹೆಬ್ಬಾಳ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎಂದರು.

ADVERTISEMENT

ನಮ್ಮ ಮಾತೃಭಾಷೆಯಾದ ಕನ್ನಡವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉಳಿಸಿ, ಬೆಳೆಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಫಾರ್ಮಸಿ ಕಾಲೇಜಿನ ಪ್ರಾಧ್ಯಾಪಕ ರವಿ ಪಾಟೀಲ, ಗಡಿಭಾಗದಲ್ಲಿ ಕನ್ನಡ ಸಂಚಾರಿ ವಾಚನಾಲಯದ ಮೂಲಕ ಕನ್ನಡಿಗರಲ್ಲಿ ಕನ್ನಡ ಭಾಷೆಯ ಸೊಗಡನ್ನು ಪ್ರಸಾರ ಮಾಡುತ್ತಿರುವ ಕಾರ್ಯ ಅತ್ಯಂತ ಪ್ರಶಂಸನೀಯ ಎಂದು ಹೇಳಿದರು.

ಸುಧಾ, ಮಯೂರ, ತರಂಗ, ಕರ್ಮವೀರ, ಕಸ್ತೂರಿ, ತುಷಾರ, ಗೃಹ ಶೋಭಾ ವಾರ ಹಾಗೂ ಮಾಸ ಪತ್ರಿಕೆಗಳ ಒಳನೋಟಗಳ ಕುರಿತು ನಂದಾ ಕೊಂಡುಬೈರಿ, ಪ್ರೇಮ ಕುಂಬಾರ, ಶ್ರೀಕಾಂತ ಟಂಕಸಾಲಿ, ಕೇಶವ ಚಿಮ್ಮಲಗಿ, ಸುಧಾ ಬಸವಂತಿ ವಿಚಾರ ವ್ಯಕ್ತಪಡಿಸಿದರು.

ಸಾಧಕರಾದ ರಮೇಶ ನಾಯಕ, ಅಶೋಕ ಉಮ್ರಾಣಿಕರ, ಅಕ್ಕಮಹಾದೇವಿ ಕನ್ನಡ ಚಲನಚಿತ್ರದ ಕಲಾವಿದರನ್ನು ಸನ್ಮಾನಿಸಿ ಸಸ್ಯಗಳನ್ನು ನೀಡುವುದರ ಮೂಲಕ ಗೌರವಿಸಿದರು.

ಕನ್ನಡ ಮಾಸ ಪತ್ರಿಕೆಗಳ ಒಳನೋಟಗಳ ಕುರಿತು ಸುಜಾತಾ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಕುಲಕರ್ಣಿ, ಡಿ. ಬಿ. ಹೆಬ್ಬಾಳ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.