ವಿಜಯಪುರ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಜೀವ ಬೆದರಿಕೆ ಹಾಕಿರುವ ಆಡಿಯೊ ನೈಜತೆ ಕುರಿತು ಪೊಲೀಸರು ತನಿಖೆ ಮಾಡಿ, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಈ ಆಡಿಯೊವನ್ನು ಯತ್ನಾಳ ಮತ್ತು ಅವರ ಬೆಂಬಲಿಗರೇ ಸೃಷ್ಟಿಸಿದ್ದಾರೆ. ಮುಸ್ಲಿಂ ಸಮಾಜದ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿ, ಅನುಕಂಪ ಗಿಟ್ಟಿಸಲು ಹುನ್ನಾರ ನಡೆಸಲಾಗಿದೆ’ ಎಂದು ಆರೋಪಿಸಿದರು.
‘ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಮುಹಮ್ಮದ್ ಪೈಗಂಬರ್‌ಗೆ ಅವಹೇಳನ ಮಾಡಿರುವ ಯತ್ನಾಳ ಬಂಧನಕ್ಕೆ ಆಗ್ರಹಿಸಿ ಏ.24 ಅಥವಾ 25 ರಂದು ವಿಜಯಪುರದಲ್ಲಿ ಬೃಹತ್ ರ‍್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಏ. 15ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ’ ಎಂದರು.
‘ಯತ್ನಾಳ ಈ ಹಿಂದೆ ಹಲವು ಬಾರಿ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತೇನೆ, ಜನ್ನತ್‌ಗೆ ಕಳುಹಿಸುತ್ತೇನೆ ಎಂದು ದ್ವೇಷ ಭಾಷಣ ಮಾಡಿದ್ದರೂ ಇದುವರೆಗೂ ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಟಿವಿ ನ್ಯೂಸ್ ಚಾನಲ್‌ನವರು ಈ ಬಗ್ಗೆ ಎಂದೂ ಸುದ್ದಿ ಬಿತ್ತರಿಸಿಲ್ಲ, ಇದೀಗ ಯತ್ನಾಳಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೊಡ್ಡ ಪ್ರಮಾಣದಲ್ಲಿ ಬಿಂಬಿಸುತ್ತಿರುವುದು ಖಂಡನೀಯ’ ಎಂದರು.
ಕಸಾಯಿಖಾನೆಗೆ ಗೋವು:
‘ಕಗ್ಗೋಡದಲ್ಲಿರುವ ಯತ್ನಾಳ ಅವರ ಗೋಶಾಲೆಗೆ ವಿಜಯಪುರ ಮಹಾನಗರ ವ್ಯಾಪ್ತಿಯಲ್ಲಿ ಹಿಡಿದ ಬೀಡಾಡಿ ದನಕರುಗಳನ್ನು ಕೊಂಡೊಯ್ದು ಬಿಡಲಾಗುತ್ತಿದೆ. ಗೋಶಾಲೆಯಿಂದ ಯತ್ನಾಳ ಅವರು ಕಲಬುರಗಿಗೆ ಅಕ್ರಮವಾಗಿ ಕಸಾಯಿಖಾನೆಗೆ ಕಳುಹಿಸುವ ಮೂಲಕ ದೊಡ್ಡ ವ್ಯವಹಾರ ಮಾಡುತ್ತಿದ್ದಾರೆ. ಇದುವರೆಗೆ ಎಷ್ಟು ಬೀಡಾಡಿ ದನಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ, ಅವುಗಳು ಏನಾದವು, ಎಲ್ಲಿಗೆ ಹೋದವು ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದು ಮುಶ್ರೀಫ್ ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಎಂ.ಸಿ.ಮುಲ್ಲಾ ಮಾತನಾಡಿ, ‘ಆಡಿಯೊಕ್ಕೂ ಮುಸ್ಲಿಂ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ. ಕಿಡಿಗೇಡಿಗಳು ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸಿದ್ದಾರೆ, ಈ ಬಗ್ಗೆ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
‘ಬಿಜೆಪಿಯಿಂದ ಉಚ್ಚಾಟನೆಯಾಗಿರುವ ಯತ್ನಾಳ ಪರ ಅನುಕಂಪ ಗಿಟ್ಟಿಸಲು ಅವರ ಬೆಂಬಲಿಗರು ಸೇರಿಕೊಂಡು ಆಡಿಯೋ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಏ.24 ಅಥವಾ 25ರಂದು ವಕ್ಫ್ ವಿರೋಧಿಸಿ ಹಾಗೂ ಯತ್ನಾಳ ಬಂಧನಕ್ಕೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ರ‍್ಯಾಲಿಗೆ ತಡೆಯೊಡ್ಡಲು ಯತ್ನಾಳ ಕಡೆಯವರು ಕುತಂತ್ರ ನಡೆಸಿದ್ದಾರೆ’ ಎಂದರು.
ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ರಫೀಕ್ ಟಪಾಲ್ ಮಾತನಾಡಿ, ‘ಆಡಿಯೊವನ್ನು ಎಫ್. ಎಸ್. ಎಲ್ ಪರೀಕ್ಷೆಗೆ ಕಳುಹಿಸಿ, ಕ್ರಮಕೈಗೊಳ್ಳಬೇಕು. ಯತ್ನಾಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಅಬ್ದುಲ್ ರಜಾಕ್ ಹೊರ್ತಿ, ಫಯಾಜ್ ಕಲಾದಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.