
ತಿಕೋಟಾ: ದ್ರಾಕ್ಷಿ, ದಾಳಿಂಬೆ ಬೆಳೆಯುವ ಗರಸು ನೆಲ ಹಾಗೂ ಮಡ್ಡಿ ಜಮೀನಿನಲ್ಲಿ ‘ಜಪಾನಿಸ್ ರೆಡ್ ಡೈಮಂಡ್’ ಎಂಬ ವಿಶೇಷ ತಳಿಯ ಪೇರು ಬೆಳೆಯುವಲ್ಲಿ ತಾಲ್ಲೂಕಿನ ಬಾಬಾನಗರ ಗ್ರಾಮದ ಬಾಹುಬಲಿ ಭೀಮನಗೌಡ ಆಯತವಾಡ ರೈತನ ಯಶಸ್ವಿಯಾಗಿದ್ದಾರೆ.
ಆಯತವಾಡ ತಮ್ಮ 14 ಎಕರೆ ಜಮೀನಿನಲ್ಲಿ ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ಜೊತೆ ಒಂದೂವರೆ ಎಕರೆ ಜಮೀನಿನಲ್ಲಿ ಗುಜರಾತ್‌ನಿಂದ ವಿಶೇಷ ತಳಿಯ ಪೇರು ಸಸಿಗಳನ್ನು ತಂದಿದ್ದಾರೆ. ಒಂದು ಸಸಿಗೆ ₹130 ರಂತೆ ಖರೀದಿಸಿ ಸಾಗಾಣಿಕೆ ವೆಚ್ಚ ಸೇರಿ ₹150 ಖರ್ಚು ಮಾಡಿ, ಒಟ್ಟು ಒಂದು ಸಾವಿರ ಸಸಿಯನ್ನು ಖರೀದಿಸಿದ್ದಾರೆ.
₹1.5 ಲಕ್ಷ ಸಸಿಗಳಿಗೆ ಹಾಗೂ ₹50 ಸಾವಿರ ಹನಿ ನೀರಾವರಿ ಹಾಗೂ ಕೂಲಿಕಾರರ ವೆಚ್ಚ ಸೇರಿ ಒಟ್ಟು ₹2 ಲಕ್ಷ ಖರ್ಚು ಮಾಡಿ, ಸಸಿ ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ 6 ಅಡಿ, ಸಾಲಿನಿಂದ ಸಾಲಿಗೆ 10 ಅಡಿ ನಾಟಿ ಮಾಡಿ ಹನಿ ನೀರಾವರಿ ಅಳವಡಿಸಿ, 6 ಅಡಿಯ ದ್ರಾಕ್ಷಿಯ ಕಲ್ಲು ಹಾಗೂ ತಂತಿ ಕಟ್ಟಿದ್ದಾರೆ.
ಸಸಿ ನೆಟ್ಟು 8 ತಿಂಗಳಿಗೆ ಹೂವು, ಮಿಡಿ ಬರಪೂರ ಬಂದಿದೆ. ಸದ್ಯ 14 ತಿಂಗಳಿಗೆ ಅಂದರೆ ಹೂವು ಹಿಡಿದು 6 ತಿಂಗಳಿಗೆ 12 ಟನ್ ಪೇರು ಬೆಳೆದಿದೆ. ಪ್ರತಿ ಕಾಯಿಗೂ ಸುರಕ್ಷಾ ಕವರ್ ಅಳವಡಿಸಿದ್ದಾರೆ. ಇದರಿಂದ ಕಾಯಿಗೆ ಯಾವುದೇ ಹುಳುವಿನ ಹಾನಿಯಾಗದೇ ರುಚಿಕರವಾದ, ಮೃದುವಾದ ಫಲ ಬಂದಿದೆ. ದೇಶದ ರಾಜಧಾನಿ ದೆಹಲಿ ಮಾರುಕಟ್ಟೆಗೆ ಪೇರು ರವಾನೆ ಮಾಡಿದ್ದಾರೆ.
‘ಕೆ.ಜಿಗೆ ₹95 ರಿಂದ ₹150ರ ವರೆಗೆ ದರ ದೊರೆತು ಖರ್ಚು ವೆಚ್ಚ ತೆಗೆದು ₹10 ಲಕ್ಷ ಆದಾಯ ಮೊದಲ ವರ್ಷದ ಮೊದಲ ಬೆಳೆಯಿಂದಲೇ ಕೈ ಸೇರಿದೆ. ಆರು ತಿಂಗಳ ನಂತರ ಎರಡನೇ ಕೊಯ್ಲು ಬರಲಿದ್ದು, ₹20 ಲಕ್ಷಕ್ಕೂ ಅಧಿಕ ಆದಾಯ ಬರುವ ನೀರಿಕ್ಷೆ ಇದೆ’ ಎಂದು ರೈತ ಬಾಹುಬಲಿ ‘ಪ್ರಜಾವಾಣಿ’ಗೆ ತಿಳಿಸಿದರು.
ನೀರಾವರಿ ಸಮೃದ್ಧಿ: ಎರಡು ಕೊಳವೆಬಾವಿ, ಒಂದು ಕೃಷಿ ಹೊಂಡ ಇದ್ದು, ಸಚಿವ ಎಂ.ಬಿ.ಪಾಟೀಲರು ಮಾಡಿದ ನೀರಾವರಿ ಯೋಜನೆಯಿಂದ ಈ ಭಾಗದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿದ್ದರಿಂದ ಕೊಳವೆಬಾವಿಗಳಿಂದ ಬರಪೂರ ನೀರು ಬರುತ್ತಿವೆ ಎನ್ನುತ್ತಾರೆ ರೈತ ಬಾಹುಬಲಿ.
ಆರೋಗ್ಯಕ್ಕೆ ಹಿತ: ಈ ಜಪಾನಿಸ್ ರೆಡ್ ಡೈಮಂಡ್ ಪೇರು ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು, ಮಧುಮೇಹ ಇರುವವರಿಗೆ ಹಾಗೂ ಜೀರ್ಣಕ್ರಿಯೆಗೆ ಈ ಹಣ್ಣು ಸಹಕಾರಿಯಾಗಲಿದೆ. ವಿಟಿಮಿನ್ ‘ಸಿ’ ಪೋಷಕಾಂಶ ದೊರೆತು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಎನ್ನಲಾಗುತ್ತಿದೆ.
–––
ದ್ರಾಕ್ಷಿ ಬೆಳೆಗೆ ಖರ್ಚು ವೆಚ್ಚ ಜಾಸ್ತಿ ಆದಾಯ ಕಡಿಮೆ. ಈ ಪೇರು ಬೆಳೆಗೆ ಖರ್ಚು ಕಡಿಮೆ ಆದಾಯ ಜಾಸ್ತಿ. ವರ್ಷದಲ್ಲಿ ಎರಡು ಬೆಳೆ ಬೆಳೆದು ಕಡಿಮೆ ಅವಧಿಯಲ್ಲಿ ಲಕ್ಷಾಂತರ ಆದಾಯ ಪಡೆಯಬಹುದು
–ಬಾಹುಬಲಿ ಭೀಮನಗೌಡ ಆಯತವಾಡ ಪೇರು ಬೆಳೆ ರೈತ ಬಾಬಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.