ADVERTISEMENT

ವಿಜಯಪುರ: ತಿರಂಗಾ ರ‍್ಯಾಲಿ; ಮೊಳಗಿದ ದೇಶ ಭಕ್ತಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 14:47 IST
Last Updated 14 ಮೇ 2025, 14:47 IST
   

ವಿಜಯಪುರ: ‘ಪಾಕಿಸ್ತಾನದ ವಿರುದ್ಧ ನಡೆದಿರುವ ‘ಆಫರೇಶನ್‌ ಸಿಂಧೂರ’ದಲ್ಲಿ ಪಾಲ್ಗೊಂಡ ದೇಶದ ಸೈನಿಕರಿಗೆ ಶಕ್ತಿ ದೊರೆಯಲಿ ಮತ್ತು ನೇತೃತ್ವ ವಹಿಸಿರುವ ಪ್ರಧಾನಿ ಮೋದಿ ಅವರಿಗೆ ಆಯಸ್ಸು, ಆರೋಗ್ಯ ವೃದ್ದಿಸಲಿ’ ಎಂದು ಪ್ರಾರ್ಥಿಸಿ ಯುವ ಭಾರತ ಸಮಿತಿ‌ ನೇತೃತ್ವದಲ್ಲಿ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ ಬುಧವಾರ ಬೃಹತ್‌ ತಿರಂಗಾ ರ‍್ಯಾಲಿ ನಡೆಯಿತು.

ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ಸಾವಿರಾರರು ಯುವ ಜನರು ನಗರದ ಶ್ರೀ ಸಿದ್ಧೆಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಡೆದ ತಿರಂಗಾ ರ‍್ಯಾಲಿಯಲ್ಲಿ ಹೆಜ್ಜೆ ಹಾಕಿದರು.

ಬರೋಬ್ಬರಿ ಒಂದು ಕಿ.ಮೀ. ಉದ್ದದ ತ್ರಿವರ್ಣ ಧ್ವಜವನ್ನು ಹೊತ್ತ ಯುವ ಜನರ ದಂಡು ಜೈ ಜವಾನ್ ಜೈ ಕಿಸಾನ್...ವೀರ ಜವಾನ್ ಅಮರ್ ರಹೇ...ವೀರ ಜವಾನ್ ಅಮರ ರಹೇ...ಎಂಬ ಉದ್ಘೋಷಗಳನ್ನು ಮೊಳಗಿಸಿದರು. ‘ವೀರ ಸೈನಿಕರೇ ಉಗ್ರರ ಸಂಹರಿಸುವ ಹೋರಾಟದಲ್ಲಿ ನಾವು ನಿಮ್ಮೊಂದಿಗೆದ್ದೇವೆ’ ಎಂದು ಹೇಳಿದರು.

ADVERTISEMENT

ಭಾರತಮಾತೆ ಭಾವಚಿತ್ರ ಹಾಗೂ ವಿರಯೋಧರ ಭಾವಚಿತ್ರ ಹೊತ್ತ ಅಲಂಕೃತ ವಾಹನ ಮೆರವಣಿಗೆಯಲ್ಲಿ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿ, ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದರು.

ವಿಜಯಪುರ–ಗದಗ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ‘ಉಗ್ರಗಾಮಿಗಳು ರಾಕ್ಷಸರಿದ್ದಂತೆ, ಮಾನವೀಯತೆ ಶತ್ರುಗಳಾಗಿರುವ ಉಗ್ರಗಾಮಿಗಳು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ಅತ್ಯಂತ ನೋವಿನ ಸಂಗತಿ, ಈ ಘಟನೆಯಿಂದ ಭಾರತೀಯರು, ಅನಿವಾಸಿ ಭಾರತೀಯರು, ವಿದೇಶಿಗರು ಕಣ್ಣೀರಿಟ್ಟಿದ್ದಾರೆ, ದೇಶದ ಈ ಘಟನೆ ಭಾರತೀಯರನ್ನು ವಿಚಲಿತರನ್ನಾಗಿಸಿದೆ’ ಎಂದರು.

‘ನಮಗೆ ದೇಶವೇ ಮೊದಲು, ದೇಶವೇ ಆದ್ಯ, ನಮ್ಮ ಸೈನಿಕರು ಧೈರ್ಯ, ಪರಾಕ್ರಮಕ್ಕೆ ಹೆಸರುವಾಸಿ, ಪ್ರತಿಭೆ ಹಾಗೂ ಧೈರ್ಯದಲ್ಲಿ ಭಾರತಕ್ಕೆ ಯಾರೂ ಸರಿಗಟ್ಟಲು ಸಾಧ್ಯವಿಲ್ಲ’ ಎಂದರು.

‘ಭಾರತೀಯ ಸೈನಿಕರ ಜೊತೆ ನಾವು ಸದಾ ಬೆನ್ನೆಲುಬಾಗಿ ನಿಲ್ಲಬೇಕು, ಅವರಿಗಾಗಿ ತಿರಂಗಾ ಯಾತ್ರೆ ನಡೆಸುತ್ತಿರುವುದು ಅರ್ಥ ಪೂರ್ಣ ಕಾರ್ಯ’ ಎಂದರು.

ಕಾರ್ಯಕ್ರಮದ ರೂವಾರಿ ಯುವ ಭಾರತ ಸಮಿತಿ ಸಂಸ್ಥಾಪಕ ಉಮೇಶ ಕಾರಜೋಳ ಮಾತನಾಡಿ, ‘ಮನಸ್ಸು ಹಾಗೂ ಮನುಷ್ಯತ್ವವೇ ಇಲ್ಲದ ಕ್ರೂರ ಉಗ್ರಗಾಮಿಗಳು ಮುಗ್ದ ಪ್ರವಾಸಿಗರ ಜೀವ ತೆಗೆದು ವಿಕೃತಿ ಮೆರೆದಿದ್ದರು, ಇಡೀ ವಿಶ್ವವೇ ಈ ಘಟನೆಯಿಂದ ಮರುಗಿತ್ತು, ಉಗ್ರಗಾಮಿಗಳು ಸರ್ವನಾಶವಾಗಬೇಕು ಎಂಬ ಸಂದೇಶ ರವಾನಿಸಿತ್ತು. ಶೌರ್ಯ, ಪರಾಕ್ರಮಗಳಿಗೆ ಹೆಸರಾದ ನಮ್ಮ ಭಾರತೀಯ ಸೈನಿಕರು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಮಾನವೀಯತೆ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

‘ಪಾಕಿಸ್ತಾನ ಉಗ್ರಗಾಮಿಗಳನ್ನು ಪೋಷಿಸುತ್ತಿದೆ. ಉಗ್ರರು ಇಡೀ ಮಾನವೀಯತೆ ವಿರೋಧಿಗಳು, ಅವರನ್ನು ಸಂಹಾರ ಮಾಡಿರುವ ನಮ್ಮ ಹೆಮ್ಮೆಯ ಸೈನಿಕರ ಋಣ ತೀರಿಸಲು ಸಾಧ್ಯವಿಲ್ಲ’ ಎಂದರು.

ಶರಣಯ್ಯ ಬಂಡಾರಿಮಠ, ಬಸವರಾಜ ಯಾದವಾಡ, ಕುಮಾರ ಕಟ್ಟಿಮನಿ, ಬಸವರಾಜ ಪತ್ತಾರ, ಅನೀಲ ಧನಶ್ರೀ ,ವಿರೇಶ ಗೊಬ್ಬೂರ, ಸಂತೋಷ ಝಳಕಿ, ಶಿವಪುತ್ರ ಪೊಪಡಿ, ಕಲ್ಮೇಶ ಅಮರಾವತಿ, ಪೂಜಾ ಬಾಗಿ, ಶ್ರೀಶೈಲ ಮಳಜಿ ಮತ್ತಿತರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.