ADVERTISEMENT

ದೇವರಹಿಪ್ಪರಗಿ: ತೊಗರಿ ಬೆಳೆಗೆ ನೆಟೆ ರೋಗ ಭೀತಿ

ಆತಂಕ ತಂದ ಸತತ ಮಳೆ, ಡೋಣಿ ತೀರದ ಜಮೀನುಗಳಲ್ಲಿ ನೀರು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 5:48 IST
Last Updated 24 ಆಗಸ್ಟ್ 2024, 5:48 IST
ದೇವರಹಿಪ್ಪರಗಿ ಪಟ್ಟಣ ಸಹಿತ ಡೋಣಿ ತೀರದ ಗ್ರಾಮಗಳಲ್ಲಿ ಸತತ ಮೂರು ದಿನಗಳಿಂದ ಸುರಿದ ಮಳೆಗೆ ತೊಗರಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಸಂಗ್ರಹವಾಗಿರುವುದು
ದೇವರಹಿಪ್ಪರಗಿ ಪಟ್ಟಣ ಸಹಿತ ಡೋಣಿ ತೀರದ ಗ್ರಾಮಗಳಲ್ಲಿ ಸತತ ಮೂರು ದಿನಗಳಿಂದ ಸುರಿದ ಮಳೆಗೆ ತೊಗರಿ ಬಿತ್ತನೆ ಮಾಡಿದ ಜಮೀನುಗಳಲ್ಲಿ ನೀರು ಸಂಗ್ರಹವಾಗಿರುವುದು   

ದೇವರಹಿಪ್ಪರಗಿ: ಸತತ ಸುರಿಯುತ್ತಿರುವ ಮಳೆಯಿಂದ ಡೋಣಿ ತೀರದ ಎರೆ ಜಮೀನುಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಬಿತ್ತನೆ ಮಾಡಿದ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗುವ ಭೀತಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಪಟ್ಟಣದ ಎರೆ ಜಮೀನುಗಳು ಸೇರಿದಂತೆ ಡೋಣಿ ತೀರದ ಗ್ರಾಮಗಳಾದ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಭೈರವಾಡಗಿ, ಯಾಳವಾರ, ಬೂದಿಹಾಳ ಜಮೀನುಗಳಲ್ಲಿ ಕಳೆದ ಮೂರು ದಿನಗಳ ಅವಧಿಯಲ್ಲಿ ಸುರಿದ ಮಳೆಯಿಂದ ಜಮೀನುಗಳ ಅರ್ಧ ಭಾಗ ನೀರಿನಿಂದ ಆವೃತ್ತವಾಗಿ ಬಿತ್ತನೆ ಮಾಡಿದ ಬಹುತೇಕ ತೊಗರಿ ಬೆಳೆ ನೀರಲ್ಲಿ ನಿಂತಿದೆ.

ಸಾತಿಹಾಳ ಗ್ರಾಮದ ಪ್ರಗತಿಪರ ರೈತ ಕೋನಪ್ಪಗೌಡ ಪಾಟೀಲ, ‘ಈಗ ಬಿತ್ತನೆ ಮಾಡಿದ ತೊಗರಿ ಬೆಳೆಗೆ 15 ದಿನಗಳಿಗೊಮ್ಮೆ ಮಳೆ ಬಂದರೆ ಸಾಕಾಗಿತ್ತು. ಆದರೆ, ಈಗ ಸತತವಾಗಿ ಸುರಿದ ಮಳೆಯಿಂದ ಜಮೀನುಗಳ ಅರ್ಧ ಭಾಗ ನೀರಿನಿಂದ ತುಂಬಿ ತೊಗರಿ ಬೆಳೆ ನೆಟೆ ರೋಗಕ್ಕೆ ತುತ್ತಾಗಿದೆ. ಈಗ ಬರುತ್ತಿರುವ ಮಳೆ ಇನ್ನೂ ಮುಂದುವರಿದರೆ ಉಳಿದ ಬೆಳೆಯೂ ಹಾಳಾಗುವುದರಲ್ಲಿ ಸಂದೇಹವಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕೆಲವು ಮರಡಿ ಜಮೀನುಗಳಿಗೆ ಮಳೆ ಉತ್ತಮವಾಗಿರಬಹುದು. ಆದರೆ, ಹಿತಮಿತ ತೇವಾಂಶ ಬಯಸುವ ಎರೆ ಜಮೀನುಗಳಿಗೆ ಅತಿ ತೇವಾಂಶವಾದರೆ ಬೆಳೆ ಬರುವುದೇ ಕಷ್ಟ. ಈಗಾಗಲೇ ಡೋಣಿ ತೀರದ ಜಮೀನುಗಳಲ್ಲಿ ಶೇ 25ರಷ್ಟು ನೀರು ನಿಂತಿದೆ. ಈಗ ಮಳೆ ನಿಲ್ಲಬೇಕು. ಆಗ ಮಾತ್ರ ಉಳಿದ ಬೆಳೆಯಾದರೂ ಬರುತ್ತದೆ. ಒಂದು ವೇಳೆ ಹೀಗೆ ಮಳೆ ಮುಂದುವರಿದರೆ ಬೆಳೆ ಬರುವುದು ಕಷ್ಟ’ ತಮ್ಮ ಬೇಸರ ವ್ಯಕ್ತಪಡಿಸಿದರು.

‘ಈಗ ಬಂದ ಮಳೆಯಿಂದಾಗಿ ಜಮೀನುಗಳ ಕೆಲವು ಒಡ್ಡುಗಳು ಸಹ ಹಾಳಾಗಿವೆ. ಈಗ ಬಿತ್ತನೆ ಮಾಡಿದ ತೊಗರಿಯಲ್ಲಿ ಅರ್ಧ ಬೆಳೆ ನೆಟೆ ರೋಗಕ್ಕೆ ಒಳಗಾಗಿದೆ. ಮರಡಿ ಜಮೀನುಗಳಲ್ಲಿ ಬೆಳೆದ ಕಬ್ಬು ಸಹ ಎರಡು ದಿನಗಳ ಹಿಂದೆ ರಭಸವಾಗಿ ಸುರಿದ ಮಳೆಗೆ ನೆಲಕ್ಕೊರಗಿದೆ. ಹಣ್ಣುಗಳಿಂದ ತುಂಬಿದ್ದ ನಿಂಬೆ, ದಾಳಿಂಬೆ ಗಿಡಗಳು ಬೇರು ಸಹಿತ ಕಿತ್ತು ಬಿದ್ದಿವೆ. ಹೀಗಾದರೆ ರೈತರ ಪರಿಸ್ಥಿತಿಯೇನು’ ಎಂದು ವೀರಣ್ಣ ಮಣೂರ, ನಾಗೇಂದ್ರ ಇಂಡಿ ಹಾಗೂ ನಿವಾಳಖೇಡ ಗ್ರಾಮದ ಚನ್ನಪ್ಪ ಕಾರಜೋಳ ಪ್ರಶ್ನಿಸಿದರು.

‘ಎರೆ ಜಮೀನುಗಳಲ್ಲಿ ಅತಿಯಾದ ಮಳೆಯಿಂದ ನೀರು ನಿಲ್ಲದಂತೆ ಮಾಡಲು ನಾವು ಕೈಗೊಳ್ಳುವ ಅಗತ್ಯ ಕ್ರಮವೆಂದರೆ ಬಸಿಕಾಲುವೆಗಳನ್ನು ನಿರ್ಮಿಸುವುದು. ಆದರೆ, ಈಗ ನೆಟೆ ರೋಗಕ್ಕೆ ತುತ್ತಾಗಿರುವ ಬೆಳೆಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಹಾಗೂ ಸಮಯವಿಲ್ಲ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ತಿಳಿಸಿದರು.

ಮಳೆ ನೀರು ನಿಂತು ಹಾಳಾದ ತೊಗರಿ ಹೊಲದ ರೈತರು ಕೂಡಲೇ ಒಂದು ಅರ್ಜಿಯೊಂದಿಗೆ ವಿಮಾ ಪ್ರತಿ ಆಧಾರ್ ಕಾರ್ಡ್ ಜಮೀನಿನ ಉತಾರ ಸಹಿತ ಬಂದು ರೈತಸಂಪರ್ಕ ಕೇಂದ್ರ ಸಂಪರ್ಕಿಸಬೇಕು  
ಸೋಮನಗೌಡ ಬಿರಾದಾರ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.