ADVERTISEMENT

ವಿಜಯಪುರ | ಧಾರಾಕಾರ ಮಳೆ; ಸಿಡಿಲಿಗೆ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:11 IST
Last Updated 13 ಮೇ 2025, 16:11 IST
ವಿಜಯಪುರ ನಗರದ ಕೆ.ಸಿ.ಮಾರ್ಕೆಟ್‌ ರಸ್ತೆ ಮೇಲೆ ಉಕ್ಕಿ ಹರಿದ ಮಳೆ ನೀರಲ್ಲೇ ಆಟೋ ರಿಕ್ಷಾಗಳು ತೆರಳಿದವು  –ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಕೆ.ಸಿ.ಮಾರ್ಕೆಟ್‌ ರಸ್ತೆ ಮೇಲೆ ಉಕ್ಕಿ ಹರಿದ ಮಳೆ ನೀರಲ್ಲೇ ಆಟೋ ರಿಕ್ಷಾಗಳು ತೆರಳಿದವು  –ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಸಿಡಿಲಿಗೆ ಇಬ್ಬರು ಮೃತಪಟ್ಟಿದ್ದಾರೆ.

ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಹೊಲದಲ್ಲಿ ಮಂಗಳವಾರ ಕೆಲಸ ಮಾಡುತ್ತಿದ್ದ ರೈತ ಮಲ್ಲಪ್ಪ ಗುರುಶಾಂತಪ್ಪ ತಾಳಿಕೋಟಿ(47) ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಮಳೆ ಬರುತ್ತಿದ್ದ ವೇಳೆ ಹೊಲದಲ್ಲಿದ್ದ ಹುಣಸೆ ಮರದ ಕೆಳಗಡೆ ಆಶ್ರಯ ಪಡೆದುಕೊಂಡಾಗ ಸಿಡಿಲು ಬಡಿದು ರೈತ ಸ್ಥಳದಲ್ಲೇ ಅಸುನೀಗಿದ್ದಾನೆ. 

ಮುದ್ದೇಬಿಹಾಳ ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕಿನ ಮಣಿಕನಾಳ ಗ್ರಾಮದ ಕೂಲಿಕಾರ್ಮಿಕ ಶ್ರೀಶೈಲ ರಾಮಲಿಂಗ ಮುಗಳಕೋಡ(35) ಎಂಬುವವರು ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ.

ADVERTISEMENT

ವಿಜಯಪುರ, ಸಿಂದಗಿ, ಬಸವನ ಬಾಗೇವಾಡಿ, ನಾಲತವಾಡ, ದೇವರಹಿಪ್ಪರಗಿಯಲ್ಲಿ ಗುಡುಗು, ಸಿಡಿಲಿನೊಂದಿಗೆ ಸುಮಾರು ಒಂದು ತಾಸು ಧಾರಾಕಾರವಾಗಿ ಮಳೆ ಸುರಿಯಿತು. ತಾಳಿಕೋಟೆ, ಹೊರ್ತಿಯಲ್ಲಿ ತುಂತುರು ಮಳೆಯಾಗಿದೆ.

ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಳೆಯ ಮರವೊಂದು ವಕೀಲರ ಕಚೇರಿ ಮೇಲೆ ಉರುಳಿ ಬಿದ್ದಿದ್ದು, ಯಾರಿಗೂ ತೊಂದರೆಯಾಗಿಲ್ಲ. ನಗರದ ಗಾಂಧಿ ಚೌಕಿಯಲ್ಲಿ ಪ್ರಯಾಣಿಕರಿಗೆ ಬಿಸಿಲಿನಿಂದ ರಕ್ಷಣೆಗಾಗಿ ಅಳವಡಿಸಿದ್ದ ಹಸಿರು ಪರೆದೆ ಹರಿದು ಬಿದ್ದಿದೆ. ನಗರದ ಕೆ.ಸಿ.ಮಾರ್ಕೆಟ್‌ ರಸ್ತೆಯಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ಜನ, ವಾಹನ ಸಂಚಾರಕ್ಕೆ ಅಡಚಣೆಯಾಯಿತು.

ಬೇಸಿಗೆ ಬಿಸಿಲಿನಿಂದ ತತ್ತರಿಸಿ ಹೋಗಿದ್ದ ವಿಜಯಪುರದ ಜನತೆ ಈ ವರ್ಷದ ಪ್ರಥಮ ಮಳೆಯಿಂದ ನಿರಾಳರಾದರು. ಬಿಸಿಲಿನಿಂದ ಕಾದು ಕಾವಲಿಯಂತಾಗಿದ್ದ ವಾತಾವರಣ ಮಳೆಯಿಂದ ತಂಪಾಯಿತು. ಮಳೆಯ ಆರ್ಭಟಕ್ಕೆ ಚರಂಡಿಗಳು ಉಕ್ಕಿ ರಸ್ತೆಯ ಮೇಲೆ ನೀರು ಹರಿಯಿತು. ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಆವರಿಸಿತ್ತು.

ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ, ನೇಬಗೇರಿ, ಗೆದ್ದಲಮರಿ, ಶಿರೋಳ, ಮುದ್ನಾಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಾರೀ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು.

ಮುದ್ದೇಬಿಹಾಳ ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದ ಇಳಿಜಾರು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಗೊಂಡು ಮುಂದೆ ಹರಿದು ಹೋಗದೇ ಕೆಲಕಾಲ ಜಲಾವೃತವಾಗಿತ್ತು. ಮುಖ್ಯರಸ್ತೆ ಹಾಗೂ ತಗ್ಗು ಪ್ರದೇಶದ ಮನೆಗಳಲ್ಲಿ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ತೀವ್ರ ಸೆಕೆಯಿಂದ ಬಳಲುತ್ತಿದ್ದ ಜನತೆಗೆ ಈ ಮಳೆ ಆಹ್ಲಾದಕರ ವಾತಾವರಣ ಸೃಷ್ಟಿಸಿಕೊಟ್ಟಿದೆ.

ಆಲಮಟ್ಟಿ ಸುತ್ತಮುತ್ತ ಬೀಸಿದ ಗಾಳಿಗೆ ಹೊಲದಲ್ಲಿನ ಶೆಡ್‌ಗಳು ಹಾರಿವೆ ಜತೆಗೆ 220 ಕೆವಿ ವಿದ್ಯುತ್ ಪ್ರಸರಣದ ಗೋಪುರ ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದು, ಹಾನಿಗೊಳಗಾಗಿವೆ.

ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಬಿಸಿಲಿನಿಂದ ಪ್ರಯಾಣಿಕರ ರಕ್ಷಣೆಗಾಗಿ ಅಳವಡಿಸಿದ್ದ ಹಸಿರು ಪರದೆ ಮಂಗಳವಾರ ಬೀಸಿದ ಗಾಳಿ ಮಳೆಗೆ ಹರಿದು ಹೋಯಿತು –ಪ್ರಜಾವಾಣಿ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.