ಆಲಮಟ್ಟಿ/ಕೊಲ್ಹಾರ: ‘ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ವಿವಿಧ ಕಾಲುವೆಗಳ ಮೂಲಕ ಈ ಭಾಗದ 49 ಕೆರೆಗಳಿಗೆ ನೀರು ಹರಿಸಬೇಕು’ ಎಂದು ಆಗ್ರಹಿಸಿ ಸ್ವಾಮೀಜಿಗಳು ಹಾಗೂ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಬಸವನಬಾಗೇವಾಡಿ ರೋಡ್ (ತೆಲಗಿ) ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಕೆಲ ಕಾಲ ರೈಲು ತಡೆದು ರೈತರು ಪ್ರತಿಭಟಿಸಿದರು.
ಮೈಸೂರು–ಸೊಲ್ಲಾಪುರ (16535) ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಸ್ವಾಮೀಜಿಗಳ ನೇತೃತ್ವದಲ್ಲಿ ಜಮಾಯಿಸಿದ ರೈತರು ರೈಲು ತಡೆದು, ರೈಲ್ವೆ ಇಲಾಖೆ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ‘ಬಳೂತಿ ಜಾಕ್‌ವೆಲ್‌ನಶಾರ್ಟ್ ಸರ್ಕೀಟ್‌ನಿಂದ ಮುಳವಾಡ ಏತ ನೀರಾವರಿ ಯೋಜನೆಯ (ಎಂಎಲ್‌ಐ) ಕಾಲುವೆಗಳಿಗೆ ನೀರು ಹರಿಸುವುದನ್ನುಸ್ಥಗಿತಗೊಳಿಸಲಾಗಿತ್ತು. ಈಗ ಜಾಕ್‌ವೆಲ್ ಆರಂಭಗೊಂಡಿದೆ. ಆದರೆ ಕೂಡಗಿ ಬಳಿ ರೈಲು ಹಳಿ ದಾಟಿಸುವ ಪ್ರಕ್ರಿಯೆ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಇದರಿಂದ ಜಲಾಶಯದಲ್ಲಿ ನೀರಿದ್ದರೂ, ಜನ–ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ‘ಈ ಕಾಲುವೆಯನ್ನು ರೈಲು ಹಳಿ ದಾಟಿಸಿದರೆ ಸುಮಾರು 49 ಕೆರೆಗಳ ಭರ್ತಿಗೆ ಅನುಕೂಲವಾಗುತ್ತಿತ್ತು. ಇದೊಂದು ಸಾಂಕೇತಿಕ ಧರಣಿ, 10 ದಿನದ ಒಳಗೆ ನೀರು ಹರಿಸದಿದ್ದರೇ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಕೆಬಿಜೆಎನ್‌ಎಲ್ ಪ್ರಭಾರ ಸೂಪರಿಂಟೆಂಡಿಂಗ್ ಎಂಜಿನಿಯರ್ ವಿನಾಯಕ ಹರನಟ್ಟಿ ಮಾತನಾಡಿ, ‘ರೈಲು ಹಳಿ ದಾಟಿಸುವ ಕೆಲಸ ರೈಲ್ವೆ ಇಲಾಖೆಗೆ ಸೇರಿದ್ದು. ಅದಕ್ಕೆ ಅಗತ್ಯವಾದ ₹ 24 ಕೋಟಿಯನ್ನು ಕೆಬಿಜೆಎನ್‌ಎಲ್ 2016ರಲ್ಲಿಯೇ ರೈಲ್ವೆ ಇಲಾಖೆಗೆ ಭರ್ತಿ ಮಾಡಿದೆ. ಕೆಲ ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಶಾಶ್ವತ ಕಾಮಗಾರಿಯ ಬದಲಾಗಿ ತುರ್ತಾಗಿ ತಾತ್ಕಾಲಿಕವಾಗಿ ಪೈಪ್‌ಲೈನ್ ಅಳವಡಿಸುವ ಕಾರ್ಯ ನಡೆಸಲಾಗುತ್ತಿದೆ. ಹೆಚ್ಚು ಕಡಿಮೆ 10 ದಿನದ ಒಳಗೆ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುತ್ತದೆ’ ಎಂದು ಭರವಸೆ ನೀಡಿದರು.
ಕೆಬಿಜೆಎನ್‌ಎಲ್ ಅಧಿಕಾರಿ ಚಂದ್ರಶೇಖರ ವಾರದ, ರೈಲ್ವೆ ಅಧಿಕಾರಿ ವಿನಾಯಕ ಪಡೋಲ್ಕರ್ ಇದ್ದರು.
ರೈತ ಮುಖಂಡರಾದ ಸದಾಶಿವ ಬರಟಗಿ, ಸಿದ್ರಾಮ ಅಂಡಗೇರಿ, ಚಂದ್ರಾಮ ತೆಗ್ಗಿ, ಕೃಷ್ಣಪ್ಪ ಬೊಮ್ಮರೆಡ್ಡಿ, ಹೊನಕೇರಪ್ಪ ತೆಲಗಿ, ಸಿದ್ಧಲಿಂಗಯ್ಯ ಹಿರೇಮಠ ಉಪಸ್ಥಿತರಿದ್ದರು.
ಬಿಗಿ ಬಂದೋಬಸ್ತ್
ಯಾವುದೇ ಗಲಾಟೆ ಸಂಭವಿಸದಂತೆ ತಡೆಗಟ್ಟಲು ಪ್ರತಿಭಟನಾಕಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 12 ಜನ ಆರ್‌ಪಿಎಫ್ ಸಿಬ್ಬಂದಿ,ಕರ್ನಾಟಕ ರೈಲ್ವೆ ಪೊಲೀಸ್ ಪಡೆಯ 26 ಸಿಬ್ಬಂದಿ,ರಾಜ್ಯ ಪೊಲೀಸ್ ಇಲಾಖೆಯ 30ಕ್ಕೂ ಹೆಚ್ಚು ಜನರು, ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.