ADVERTISEMENT

ವಿಜಯಪುರ: ಶಿಕ್ಷಕರ ವರ್ಗಾವಣೆ, ಬಡ್ತಿಯಲ್ಲಿ ಅವ್ಯವಹಾರ!

ಶಿಕ್ಷಕರಿಂದ ಹಣ ದೋಚಿದ ನಿವೃತ್ತ ಡಿಡಿಪಿಐ ಎನ್‌.ವಿ.ಹೊಸೂರ

ಬಸವರಾಜ ಸಂಪಳ್ಳಿ
Published 22 ಸೆಪ್ಟೆಂಬರ್ 2022, 19:30 IST
Last Updated 22 ಸೆಪ್ಟೆಂಬರ್ 2022, 19:30 IST
   

ವಿಜಯಪುರ:ಪಿಎಸ್‌ಐ ಅಕ್ರಮ ನೇಮಕಾತಿ, ಶಿಕ್ಷಕರ ಅಕ್ರಮ ನೇಮಕ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳ ನೇಮಕ ಹಗರಣ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲೂ ಅಂತಹದೇ ಒಂದು ದೊಡ್ಡ ಭ್ರಷ್ಟಾಚಾರ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕಿರಿಯ ಶಿಕ್ಷಕರಿಗೆ ನಿಯಮ ಬಾಹಿರವಾಗಿ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡಲಾಗಿದೆ ಹಾಗೂ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು ಜಿಲ್ಲಾ ಕೇಂದ್ರದಿಂದ ದೂರ ಇರುವ ಶಾಲೆಗಳ ಶಿಕ್ಷಕರನ್ನು ಉದ್ದೇಶ ಪೂರ್ವಕವಾಗಿ(ಹಣಕ್ಕಾಗಿ) ಅಮಾನತು ಮಾಡಿ ಬಳಿಕ ಅವರನ್ನು ವಿಜಯಪುರ ನಗರ ಮತ್ತು ನಗರದ ಸಮೀಪದ ಶಾಲೆಗಳಿಗೆ ನಿಯುಕ್ತಿಗೊಳಿಸಿರುವುದು ಬಯಲಾಗಿದೆ.

ಇಡೀ ಪ್ರಕರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎನ್‌.ವಿ. ಹೊಸೂರ ಹಾಗೂ ಶಿಕ್ಷಕರ ಸಂಘಟನೆಗಳು ಪದಾಧಿಕಾರಗಳು ನೇರವಾಗಿ ಭಾಗಿಯಾಗಿರುವುದು ಖಚಿತವಾಗಿದೆ.

ADVERTISEMENT

ಕ್ರಮಕ್ಕೆ ಆಯುಕ್ತರಿಗೆ ಸಿಇಒ ಪತ್ರ:‘ನಿವೃತ್ತ ಡಿಡಿಪಿಐ ಎನ್‌.ವಿ.ಹೊಸೂರ ಅವರು ಮಾಡಿರುವ ಬಡ್ತಿ ಮತ್ತು ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್‌ ಶಿಂಧೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಹೆಚ್ಚುವರಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಎನ್‌.ವಿ.ಹೊಸೂರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿವೃತ್ತಿ ಹೊಂದುವ ಪೂರ್ವದಲ್ಲಿ (ಜೂನ್‌ 30) ಮತ್ತು ನಿವೃತ್ತಿ ನಂತರ ಮುಖ್ಯ ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿ ಹೆಸರಿಲ್ಲದ ಮತ್ತು ತುಂಬಾ ಕಿರಿಯರಾದ ಶಿಕ್ಷಕರಿಗೆ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಆದೇಶವನ್ನು ಕೌನ್ಸೆಲಿಂಗ್‌ ಮಾಡದೇ ಮನೆಯಲ್ಲಿ ತಯಾರಿಸಿದ್ದಾರೆ. ಈ ಮೂಲಕ ಜೇಷ್ಠತೆಯನ್ನು ಹೊಂದಿರುವ ಶಿಕ್ಷಕರಿಗೆ ಬಡ್ತಿಯಿಂದ ವಂಚಿಸಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿಕ್ಷಕರ ಜೇಷ್ಠತಾ ಪಟ್ಟಿಯಲ್ಲಿನ 326 ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ 2022ರ ಏಪ್ರಿಲ್‌ 28ರಂದು ಮತ್ತು ಶಾಲಾ ಮುಖ್ಯ ಶಿಕ್ಷಕರಿಗೆ 2022ರ ಏಪ್ರಿಲ್‌ 30 ಜೇಷ್ಠತಾ ಪಟ್ಟಿಯ 126 ಹಿರಿಯ ಮುಖ್ಯ ಶಿಕ್ಷಕರಿಗೆ ಕೌನ್ಸೆಲಿಂಗ್‌ ನಿಯಮ ಉಲ್ಲಂಘಿಸಿ ಬಡ್ತಿ ನೀಡಲಾಗಿದೆ. ಅಲ್ಲದೇ, ಅರ್ಹ ಶಿಕ್ಷಕರಿಗೆ ಅನ್ಯಾಯ ಮಾಡಿ, ವ್ಯವಸ್ಥೆ ಹಾಳು ಮಾಡಲಾಗಿದೆ ಎಂದು ಸಿಇಒ ಅವರು ಶಿಕ್ಷಣ ಇಲಾಖೆಯ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಎನ್‌.ವಿ.ಹೊಸೂರ ಅವರು ನಿವೃತ್ತಿಗೆ ಒಂದು ವಾರ ಮೊದಲು ಮತ್ತು ನಂತರದಲ್ಲಿ ಹಲವಾರು ಶಿಕ್ಷಕರನ್ನು ವಿನಾ ಕಾರಣ ಅಮಾನತು ಮಾಡಿ ಅವರನ್ನು ವಿಜಯಪುರ ನಗರ ಮತ್ತು ನಗರ ಸಮೀಪದ ಶಾಲೆಗಳಿಗೆ ಒಂದೆರಡು ದಿನಗಳಲ್ಲೇ ಸ್ಥಳ ನಿಯುಕ್ತಿ ಮಾಡಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಣ ಕಳೆದುಕೊಂಡ ಶಿಕ್ಷಕರು:ಹಣ ನೀಡಿ ಬಡ್ತಿ ಮತ್ತು ವರ್ಗಾವಣೆ ಮಾಡಿಸಿಕೊಂಡ ಬಹುತೇಕ ಶಿಕ್ಷಕರಿಗೆ ಇದೀಗ ಬಡ್ತಿ ಮತ್ತು ವರ್ಗಾವಣೆಯೂ ಸಿಗದೇ, ಅತ್ತಹಣವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

***

ಅಕ್ರಮವಾಗಿ ನೀಡಲಾಗಿದ್ದ ಬಡ್ತಿ, ವರ್ಗಾವಣೆಯನ್ನು ಹಿಂಪಡೆಯುವ ಪ್ರಕ್ರಿಯೆ ನಡೆದಿದೆ. ಜೊತೆಗೆ ಪ್ರಕರಣದ ಕುರಿತು ಇಲಾಖಾ ತನಿಖೆಯೂ ನಡೆಯುತ್ತಿದೆ. ಕೆಲವರು ಕೆಎಟಿ ಮೊರೆ ಹೋಗಿದ್ದಾರೆ
–ಉಮೇಶ ಶಿರಹಟ್ಟಿಮಠ, ಡಿಡಿಪಿಐ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.