ವಿಜಯಪುರ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್ ಮಂಗಳವಾರ ಕರೆ ನೀಡಿದ್ದ ಸಾರಿಗೆ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ವಿಜಯಪುರ 1, 2 ಮತ್ತು 3 ಘಟಕಗಳು ಹಾಗೂ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ ಮತ್ತು ತಾಳಿಕೋಟೆ ಘಟಕಗಳಿಂದ ಬಹುಪಾಲು ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆಯೇ ಶಾಲೆ, ಕಾಲೇಜು, ನೌಕರಿಗೆ ಹಾಗೂ ವಿವಿಧ ನಗರ, ಪಟ್ಟಣಗಳಿಗೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಸರ್ಕಾರಿ ಕಚೇರಿಗಳಲ್ಲೂ ನೌಕರರ ಹಾಜರಾತಿ ಕಡಿಮೆ ಇತ್ತು.
ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ಬಸ್ ನಿಲ್ದಾಣ ಮತ್ತು ಡಿಪೋಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಬಸ್ಸುಗಳು ಸಾಲುಗಟ್ಟಿ ನಿಂತಿದ್ದವು. ಜನರು ಪ್ರಯಾಣ ಸಾಧ್ಯವಾಗದೇ ಬಸ್ ನಿಲ್ದಾಣಗಳಲ್ಲಿ ಕಾದು ಕುಳಿತಿದ್ದರು.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ಸುಗಳು ವಿಜಯಪುರ ನಗರದ ಸೆಟಲೈಟ್ ಬಸ್ ನಿಲ್ದಾಣಕ್ಕೆ ಎಂದಿನಂತೆ ಬಂದು ಹೋದವು. ಆದರೆ, ಅವುಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.
ಆಟೋ, ಟಂಟಂ, ಕ್ರೂಸರ್, ಟೆಂಪೋ, ಖಾಸಗಿ ಬಸ್ಸುಗಳು, ಖಾಸಗಿ ವಾಹನಗಳು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣಗಳ ಒಳಗೆ ಬಂದು, ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವುದು, ಬರುವುದು ಕಂಡುಬಂದಿತು. ಅಲ್ಲದೇ, ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡಿದ ಆರೋಪ ಕೇಳಿಬಂದಿತು.
ಸಾರಿಗೆ ಮುಷ್ಕರದ ಪರಿಣಾಮ ವಿಜಯಪುರ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲೂ ಜನ ಸಂಚಾರ, ವ್ಯಾಪಾರ, ವಹಿವಾಟು ತಗ್ಗಿತ್ತು. ರಸ್ತೆಗಳಲ್ಲಿ ಕಾರು, ಬೈಕು, ಆಟೋ, ಟಂಟಂಗಳು, ಕ್ರೂಸರ್ ಕುದುರೆ ಟಾಂಗಾಗಳ ಸಂಚಾರ ಅಧಿಕವಾಗಿತ್ತು.
ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣ, ಸೆಟಲೈಟ್ ಬಸ್ ನಿಲ್ದಾಣ, ಸಿಂದಗಿ ಪಟ್ಟಣದ ಪೂಜ್ಯ ಚೆನ್ನವೀರಸ್ವಾಮೀಜಿ ಕೇಂದ್ರ ಬಸ್ ನಿಲ್ದಾಣ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟೆ, ನಾಲತವಾಡ, ಕಲಕೇರಿ, ಆಲಮೇಲ, ಇಂಡಿ, ಚಡಚಣ, ಹೊರ್ತಿ, ತಿಕೋಟಾ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ ಬಸ್ ನಿಲ್ದಾಣಗಳು ಬಸ್ಸುಗಳು ಮತ್ತು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದ್ದವು.
ಸಾರಿಗೆ ಮುಷ್ಕರಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ | ಸಂಚಾರಕ್ಕೆ ಖಾಸಗಿ ವಾಹನಗಳನ್ನು ನೆಚ್ಚಿಕೊಂಡ ಪ್ರಯಾಣಿಕರು | ದುಪ್ಪಟ್ಟು ದರ ವಸೂಲಿ ಆರೋಪ
ವಿಜಯಪುರ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲನಾರಾಯಣಪ್ಪ ಕುರುಬರ ಜಿಲ್ಲಾ ವ್ಯವಸ್ಥಾಪಕ ಕೆಕೆಆರ್‌ಟಿಸಿ ವಿಜಯಪುರ
142 ಬಸ್ಸುಗಳು ಮಾತ್ರ ಸಂಚಾರ
ವಿಜಯಪುರ ಜಿಲ್ಲೆಯಲ್ಲಿ ಮುಷ್ಕರ ಶಾಂತಿಯುತವಾಗಿ ನಡೆದಿದೆ. ಯಾವುದೇ ತೊಂದರೆಯಾಗಿಲ್ಲ. ಮಂಗಳವಾರ ವಿಜಯಪುರ ಡಿಪೋ 1ರಿಂದ 7 ಡಿಪೋ 2ರಿಂದ 10 ಡಿಪೋ 3 ರಿಂದ 11 ಇಂಡಿ ಡಿಪೋದಿಂದ 6 ಸಿಂದಗಿ ಡಿಪೋದಿಂದ 14 ಮುದ್ದೇಬಿಹಾಳ ಡಿಪೋದಿಂದ 66 ತಾಳಿಕೋಟೆ ಡಿಪೋದಿಂದ 8 ಹಾಗೂ ಬಸವನ ಬಾಗೇವಾಡಿ ಡಿಪೋದಿಂದ 20 ಬಸ್ಸುಗಳು ಸೇರಿದಂತೆ ಒಟ್ಟು 142 ಬಸ್ಸುಗಳು ಮಾತ್ರ ಸಂಚರಿಸಿವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ಜಿಲ್ಲಾ ವ್ಯವಸ್ಥಾಪಕ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.