ADVERTISEMENT

ಸಾರಿಗೆ ನೌಕರರ ಮುಷ್ಕರ; ಬಸ್‌ಗಳಿಗೆ ಕಲ್ಲು

ಬಸ್‌ ಸಂಚಾರ ಏಕಾಏಕಿ ಬಂದ್‌; ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 12:08 IST
Last Updated 11 ಡಿಸೆಂಬರ್ 2020, 12:08 IST
ವಿಜಯಪುರದಿಂದ ವಿವಿಧ ನಗರ, ಪಟ್ಟಣಗಳಿಗೆ ತೆರಳಲು ಬಸ್ಸುಗಳ ಇಲ್ಲದ ಕಾರಣ  ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತಿರುವ ಪ್ರಯಾಣಿಕರು –ಪ್ರಜಾವಾಣಿ ಚಿತ್ರ
ವಿಜಯಪುರದಿಂದ ವಿವಿಧ ನಗರ, ಪಟ್ಟಣಗಳಿಗೆ ತೆರಳಲು ಬಸ್ಸುಗಳ ಇಲ್ಲದ ಕಾರಣ  ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತಿರುವ ಪ್ರಯಾಣಿಕರು –ಪ್ರಜಾವಾಣಿ ಚಿತ್ರ   

ವಿಜಯಪುರ: ಸರ್ಕಾರಿ ನೌಕರರೆಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮುಷ್ಕರ ನಡೆಸಿದರು.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ತಾಳಿಕೋಟೆ ಡಿಪೊಗೆ ಸೇರಿದ ಎರಡು ಬಸ್‌ಗಳಿಗೆ ಹಾಗೂ ವಿಜಯಪುರ ನಗರದ ಸೆಟಲೈಟ್‌ ಬಸ್‌ ನಿಲ್ದಾಣದಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ವೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ ಪರಿಣಾಮ ಬಸ್‌ಗಳ ಗಾಜುಗಳು ಪುಡಿಯಾಗಿವೆ.

ಏಕಾಏಕಿ ಬಸ್‌ ಸಂಚಾರ ಸ್ಥಗಿತವಾದ ಕಾರಣ ವಿವಿಧ ನಗರ, ಪಟ್ಟಣ, ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಬಸ್‌ ನಿಲ್ದಾಣದಲ್ಲೇ ಕಾಲ ಕಳೆಯುವಂತಾಯಿತು.

ADVERTISEMENT

ಎಂದಿನಂತೆ ಬೆಳಿಗ್ಗೆ ಬಸ್‌ ಸಂಚಾರ ಇತ್ತಾದರೂ ಬೆಳಿಗ್ಗೆ 10 ಗಂಟೆ ಬಳಿಕ ಏಕಾಏಕಿ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಮಾರ್ಗಮಧ್ಯೆ ಸಿಲುಕಿಕೊಳ್ಳುವಂತಾಯಿತು. ಇದರಿಂದ ಬೇಸತ್ತ ಪ್ರಯಾಣಿಕರು ಬಸ್‌ ಚಾಲಕರು, ನಿರ್ವಾಹಕರು ಹಾಗೂ ಪೊಲೀಸರಿಂದಿಗೆ ವಾಗ್ವಾದ ನಡೆಸಿದರು. ಬಸ್‌ ಸಂಚಾರ ಆರಂಭಿಸುವಂತೆ ಆಗ್ರಹಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಯಾಣಿಕ ಸಂಗಮೇಶ ಕಟ್ಟಿಮನಿ, ಬಸ್‌ ಸೇವೆ ಬಂದ್‌ ಇರುವುದು ತಿಳಿದಿರಲಿಲ್ಲ. ಹುಬ್ಬಳ್ಳಿಗೆ ತುರ್ತಾಗಿ ಹೋಗಬೇಕಾಗಿತ್ತು. ಹೀಗಾಗಿ ಇಂಡಿಯಿಂದ ಬೆಳಿಗ್ಗೆಯೇ ವಿಜಯಪುರಕ್ಕೆ ಬಂದಿದ್ದೇನೆ. ಈಗ ಮರಳಿ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇತ್ತ ಹುಬ್ಬಳ್ಳಿಗೂ ಹೋಗಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿಪ್ರತಿಭಟನಾ ನಿರತ ಸಾರಿಗೆ ನೌಕರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

‘ಜಿಲ್ಲೆಯಲ್ಲಿ ಒಟ್ಟು 622 ರೂಟ್‌ಗಳಲ್ಲಿ ಬೆಳಿಗ್ಗೆ ಬಸ್‌ ಸಂಚಾರ ಎಂದಿನಂತೆ ಆರಂಭವಾಯಿತು. ಬಳಿಕ ಚಾಲಕರು, ನಿರ್ವಾಹಕರು ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿ ಬಂದ್‌ ನಡೆಸಿದ ಕಾರಣ ಶೇ 50ರಷ್ಟು ಬಸ್‌ಗಳು ಕಾರ್ಯಾಚರಣೆ ಸ್ಥಗಿತಗೊಳಿಸಿದವು. ಮುಷ್ಕರ ಹಿಂಪಡೆಯುವಂತೆಚಾಲಕರು, ನಿರ್ವಾಹಕರಿಗೆ ಸೂಚನೆ ನೀಡಿದ್ದೇವೆ’ ಎಂದುಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರಿನಲ್ಲಿ ಮುಷ್ಕರ ನಿರತ ನೌಕರರೊಂದಿಗೆಸಚಿವರು, ಅಧಿಕಾರಿಗಳು ಸಭೆ ನಡೆಸಿದ್ದು, ಪರಿಸ್ಥಿತಿ ನೋಡಿಕೊಂಡು ಬಸ್‌ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.