ಇಂಡಿ: ತಾಯಿ ಹೆಸರಲ್ಲಿ ಒಂದು ಗಿಡ (ಏಕ್ ಪೇಡ್ ಮಾ ಕೆ ನಾಮ್) ಅಭಿಯಾನದ ಅಡಿ ಐದು ಸಾವಿರ ಸಸಿಗಳನ್ನು ನೆಡುವ ಮೂಲಕ ಶೈಕ್ಷಣಿಕ ಜಿಲ್ಲೆ ವಿಜಯಪುರದಲ್ಲಿ ಇಂಡಿ ತಾಲ್ಲೂಕು ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದೆ.
ಜೂನ್ 5ರಂದು ವಿಶ್ವ ಪರಿಸರ ದಿನದಿಂದ ಹಸಿರು ಹೆಚ್ಚಿಸುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕ್ ಪೇಡ್ ಮಾ ಕೆ ನಾಮ್ ಆರಂಭಿಸಿ 4 ತಿಂಗಳಿಂದ ತಾಲ್ಲೂಕಿನಾದ್ಯಂತ ಈ ಆಭಿಯಾನಕ್ಕೆ ಬೆಂಬಲವಾಗಿ ಶಾಲೆಗಳು ಭಾಗವಹಿಸಿದ್ದು ಸೆ. 30ಕ್ಕೆ ಮುಕ್ತಾಯಗೊಂಡಿದೆ.
ಇಂಡಿ ತಾಲ್ಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೂಚನೆಯಂತೆ ಎಲ್ಲ ಶಾಲೆಗಳಲ್ಲಿ ತಾಯಿ ಹೆಸರಲ್ಲಿ ಒಂದು ಗಿಡ ಅಭಿಯಾನ ನಡೆಸುವ ಮೂಲಕ 5,112 ಸಸಿಗಳನ್ನು ನಡೆಸಲಾಗಿದೆ. ಸರ್ಕಾರಿ 24, ಅನುದಾನಿತ 25, ಅನುದಾನ ರಹಿತ 32 ಪ್ರಾಢಶಾಲೆಗಳು, ಸರ್ಕಾರಿ 162 ಕಿರಿಯ ಪ್ರಾಥಮಿಕ, 115 ಹಿರಿಯ ಪ್ರಾಥಮಿಕ, ಅನುದಾನ ಸಹಿತ 10 ಅನುದಾನ ರಹಿತ 72 ಪ್ರಾಥಮಿಕ ಶಾಲೆಗಳಿವೆ. ಅದಲ್ಲದೇ ತಾಲ್ಲೂಕಿನ ನಾದ ಕೆ.ಡಿ ಸರ್ಕಾರಿ ಪ್ರಾಢಶಾಲೆ, ಸರ್ಕಾರಿ ಪ್ರಾಢಶಾಲೆ ಲಚ್ಯಾಣ, ಬಂಥನಾಳದ ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಅನೇಕ ಶಾಲೆಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅದರಲ್ಲೂ ತಾಲ್ಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚಿನ ಶಾಲೆಗಳ ಮಕ್ಕಳು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಹೀಗೆ ನೆಡಲಾದ ಸಸಿಗಳಿಗೆ ಮಕ್ಕಳು ಬಿಡುವಿನ ಸಮಯದಲ್ಲಿ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆ.
‘ಅಭಿಯಾನ ಯಶಸ್ವಿಗೊಳಿಸಲು ಶಿಕ್ಷಕರು, ಸಿಆರ್‌ಪಿಗಳು ಜವಾಬ್ದಾರಿ ವಹಿಸಿಕೊಂಡು ಮಕ್ಕಳಿಗೆ ಗಿಡ ನೆಡುವಂತೆ ಪ್ರೋತ್ಸಾಹಿಸಿದ್ದರು. ಗಿಡ ನೆಡಲು ವಿಶೇಷ ಕ್ಲಬ್ ರಚಿಸಲಾಗಿತ್ತು. ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಸೇರಿ ಎಲ್ಲ ಶಾಲೆಗಳ ಆಡಳಿತ ಮಂಡಳಿಗಳಿಗೆ ಈ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ಮನವರಿಕೆ ಮಾಡಲಾಗಿತ್ತು. ಅರಣ್ಯ ಇಲಾಖೆ ನೀಡಿದ ಸಸಿ ಮಾತ್ರವಲ್ಲದೇ ಶಿಕ್ಷಕರು ಮಕ್ಕು, ಪೋಷಕರು ಸ್ವಯಂ ಖರ್ಚಿನಲ್ಲೂ ಸಸಿಗಳನ್ನು ತಂದು ನೆಟ್ಟಿದ್ದಾರೆ’ ಎಂದು ಇಂಡಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ತಿಳಿಸಿದರು.
ಮಕ್ಕಳ ಶಿಕ್ಷಕರು ಗ್ರಾಮಸ್ಥರ ಸಹಾಯದಿಂದ ಗಿಡಗಳನ್ನು ತಾಯಿಯ ಹೆಸರಿನಲ್ಲಿ ಪೋಷಣೆ ಮಾಡಲಾಗುತ್ತಿದೆಸತೀಶ ಸಜ್ಜನ, ಪ್ರಾಚಾರ್ಯರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಂಥನಾಳ
ಆನ್‌ಲೈನ್ ಮೂಲಕ ನೋಂದಣಿ
ಪ್ರತಿ ಸಸಿ ನೆಡುವ ಮಗುವಿನ ಹೆಸರನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಲಾಯಿತು. ಶಾಲೆಯ ಪ್ರತಿ ಮಗುವೂ ತಾಯಿಯೊಂದಿಗೆ ಸಸಿ ನೆಟ್ಟು ಫೋಟೊ ತೆಗೆದು ಅದನ್ನು ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕಿತ್ತು. ಶಿಕ್ಷಕರು ಮಕ್ಕಳ ಫೋಟೊಗಳನ್ನು ಅಪ್‌ಲೋಡ್ ಮಾಡುವ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಇಂಡಿ ಪ್ರಾದೇಶಿಕ ಅರಣ್ಯಾಧಿಕಾರಿ ಎಸ್.ಜಿ. ಸಂಗಾಲಕ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.