ADVERTISEMENT

ಅಧಿಕಾರಿಗಳಿಂದ ತೊಂದರೆ: ದೂರು ನೀಡಿದರೆ ಕ್ರಮ - ಬಿ.ಎಸ್‌.ಪಾಟೀಲ

ಲೋಕಾಯುಕ್ತ ನ್ಯಾಯಮೂರ್ತಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 7:01 IST
Last Updated 25 ಜೂನ್ 2022, 7:01 IST
ವಿಜಯಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಲೋಕಾಯುಕ್ತ ಬಿ.ಎಸ್‌.ಪಾಟೀಲ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು
ವಿಜಯಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಲೋಕಾಯುಕ್ತ ಬಿ.ಎಸ್‌.ಪಾಟೀಲ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು   

ವಿಜಯಪುರ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯಿಂದ ಆಗುತ್ತಿರುವ ವಿಳಂಬ, ತೊಂದರೆ, ಸಮಸ್ಯೆಯ ಬಗ್ಗೆ ಜನರು ಲೋಕಾಯುಕ್ತಗೆ ತಿಳಿಸಬೇಕು. ಜನರು ಸ್ವಯಂ ಪ್ರೇರಿತವಾಗಿ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಲೋಕಾಯುಕ್ತ ಬಿ.ಎಸ್‌.ಪಾಟೀಲ ಮನವಿ ಮಾಡಿದರು.

ನಗರದ ಲೋಕಾಯುಕ್ತ ಕಚೇರಿಯಲ್ಲಿ ಶುಕ್ರವಾರವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಲೋಕಾಯುಕ್ತ ಎಸ್‌ಪಿ, ಡಿಎಸ್‌ಪಿ, ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಆಡಳಿತ ಸುಧಾರಣೆ ಉದ್ದೇಶದಿಂದ ಲೋಕಾಯುಕ್ತ ರಚನೆಯಾಗಿದೆ. ಉತ್ತಮ ಆಡಳಿತ ಸಿಗಬೇಕು ಎಂದಾದರೆ ಜನರು ಮುಂದೆ ಬಂದು ಅಧಿಕಾರಿಗಳಿಂದ ಆಗುತ್ತಿರುವ ತೊಂದರೆ, ಕಿರುಕುಳದ ಬಗ್ಗೆ ಹೇಳಬೇಕು. ಆಗ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ ಎಂದು ಹೇಳಿದರು.

ADVERTISEMENT

ಲೋಕಾಯುಕ್ತ ಎಸ್‌ಪಿ, ಡಿವೈಎಸ್‌ಪಿ, ಇನ್‌ಸ್ಪೆಕ್ಟರ್‌ ಮತ್ತು ಸಿಬ್ಬಂದಿ ತಾಲ್ಲೂಕುವಾರು ಭೇಟಿ ನೀಡಬೇಕು, ಭೇಟಿ ನೀಡುವ ಮುನ್ನಾ ಪ್ರಕಟಣೆ ನೀಡಬೇಕು, ಜನರ ಸಮಸ್ಯೆ ಆಲಿಸಬೇಕು, ಸಮಸ್ಯೆಗಳಿಗೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ಸೂಚನೆ ನೀಡಿರುವುದಾಗಿ ತಿಳಿಸಿದರು.

ಕಂದಾಯ ಇಲಾಖೆ, ಪಂಚಾಯತ್‌ ರಾಜ್‌ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಯಾವುದೇ ಇಲಾಖೆಯ ಫಲಾನುಭವಿಗಳಿಗೆ ಮುಟ್ಟಬೇಕಾದ ಸರ್ಕಾರದ ವಿವಿಧ ಯೋಜನೆಗಳು ತಲುಪದೇ ಇದ್ದರೆ ಜನರು ದೂರು ನೀಡಬೇಕು. ಲೋಕಾಯುಕ್ತ ಅಧಿಕಾರಿಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಕರೆದು ವಿಚಾರಣೆಗೆ ಒಳಪಡಿಸಿ, ಕ್ರಮಕೈಗೊಳ್ಳಬೇಕು ಎಂದರು.

ಅರಣ್ಯ ಪ್ರಮಾಣ ಹೆಚ್ಚಳಕ್ಕೆ ಸೂಚನೆ:ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ರಾಜ್ಯದಲ್ಲೇ ಅತೀ ಕಡಿಮೆ ಅಂದರೆ, ಕೇವಲ ಶೇ 0.17 ರಷ್ಟು ಮಾತ್ರ ಇದೆ. ಭೌಗೋಳಿಕವಾಗಿ ಶೇ 33ರಷ್ಟು ಇರಬೇಕಿತ್ತು. ಆದರೆ, ಶೇ 1ರಷ್ಟೂ ಇಲ್ಲ. ಇದರಿಂದ ಆಗುವ ದುಷ್ಪರಿಣಾಮ ಹೆಚ್ಚು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ನೀರಾವರಿ ಪ್ರದೇಶ ಹೆಚ್ಚಳವಾಗುತ್ತಿದೆ. ಜನರು ಗಿಡಗಳನ್ನು ಹಚ್ಚಲು ಮುಂದೆ ಬರುತ್ತಿದ್ದಾರೆ. ಅರಣ್ಯ ಇಲಾಖೆ ಗಿಡಗಳ ವಿತರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಹಸಿರು ಪ್ರದೇಶ ವೃದ್ಧಿಯಾಗಲು ಅಗತ್ಯ ಕ್ರಮಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್‌ಟಿಒ ಕಚೇರಿಗೆ ಭೇಟಿ:ಸಭೆಯ ಬಳಿಕ ಲೋಕಾಯುಕ್ತರು ವಿಜಯಪುರ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರ್‌ಟಿಒ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದರು.

***
ಸರ್ಕಾರಿ ಅಧಿಕಾರಿಗಳು ಚಾಕಚಕ್ಯತೆ, ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು.ಕೆಲ ಅಧಿಕಾರಿಗಳು ಚುರುಕಿದ್ದಾರೆ, ಇನ್ನು ಕೆಲವರು ಚುರುಕಿಲ್ಲ. ಈ ಮಂದ ಅಧಿಕಾರಿಗಳು ಚುರುಕಾದರೆ ಮಾತ್ರ ಆಡಳಿತ ಸುಧಾರಣೆಯಾಗುತ್ತದೆ
–ಬಿ.ಎಸ್‌.ಪಾಟೀಲ,ಲೋಕಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.