ADVERTISEMENT

ಯುಜಿಸಿ ನಿಯಮಾವಳಿ ಯಥಾ ರೀತಿ ಜಾರಿಗೆ ಆಗ್ರಹ

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:46 IST
Last Updated 10 ಫೆಬ್ರುವರಿ 2026, 4:46 IST
ವಿಜಯಪುರ ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು
ವಿಜಯಪುರ ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ತಡೆಗೆ ರೂಪಿಸಿರುವ ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮಗಳು 2026’ರನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರ ಬಣ) ಜಿಲ್ಲಾ ಸಮಿತಿಯಿಂದ ಒತ್ತಾಯಿಸಲಾಯಿತು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಡಿಎಸ್ಎಸ್‌ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಮಾತನಾಡಿ, ‘ದಲಿತ-ಹಿಂದುಳಿದ-ಬುಡಕಟ್ಟು ಸಮುದಾಯ ವಿದ್ಯಾರ್ಥಿ ಸಮೂಹ ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯದ ಸುಳಿಗಾಳಿಗೆ ಸಿಕ್ಕು ಪ್ರತಿ ಕ್ಷಣವೂ ನರಳುತ್ತಿವೆ. ಕೋಮುವಾದಿ, ಜಾತಿವಾದಿ ಆರ್.ಎಸ್.ಎಸ್. ಹಾಗೂ ಎ.ಬಿ.ವಿ.ಪಿ.ಸಂಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿರುವ ಸಮಾಜ, ದೇಶ ವಿರೋಧಿ ಚಟುವಟಿಕೆಗಳು ವಿಶ್ವವಿದ್ಯಾಲಯದ ಸದುದ್ದೇಶವನ್ನೇ ಮಣ್ಣುಪಾಲು ಮಾಡುತ್ತಿವೆ. ಕೆಲವು ಜಾತಿವಾದಿ, ಕೋಮುವಾದಿ ಹಿನ್ನೆಲೆಯ ಕುಲಪತಿಗಳು, ಕುಲಸಚಿವರು, ಪ್ರಾಧ್ಯಾಪಕರು ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದ್ದಾರೆ’ಎಂದು ಆರೋಪಿಸಿದರು.

ADVERTISEMENT

‘ಕೇಂದ್ರ ಸರ್ಕಾರವೇ ಸುಪ್ರಿಂಕೋರ್ಟ್‌ಗೆ ಸಲ್ಲಿಸಿರುವ ಅಂಕಿ-ಅಂಶಗಳ ಪ್ರಕಾರ ಐಐಟಿ, ಐಐಎಂ, ಎನ್‌ಐಟಿ, ಶಿಕ್ಷಣ ಸಂಸ್ಥೆಗಳಲ್ಲಿ 112 ವಿದ್ಯಾರ್ಥಿಗಳು ಇದುವರೆಗೆ ಜಾತಿ ದೌರ್ಜನ್ಯಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ವಿಶ್ವವಿದ್ಯಾಲಯದೊಳಗಿನ ಹೋರಾಟವನ್ನು ಹತ್ತಿಕ್ಕಲು ಜಾತಿ ಕಿರುಕುಳ ಹಾಗೂ ಸುಳ್ಳು ಪೊಲೀಸ್ ಪ್ರಕರಣಗಳನ್ನು ದಾಖಲಿಸಿರುವುದನ್ನು ಕೂಡ ಗಮನಿಸಬಹುದಾಗಿದೆ’ ಎಂದರು.

‘ವಿಶ್ವವಿದ್ಯಾಲಯ ಅನುದಾನ ಆಯೋಗ  ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಸಮಾನತೆ ಪ್ರೋತ್ಸಾಹಿಸಲು ತಂದಿರುವ ನಿಯಮಾವಳಿ (2026)ಗಳಿಗೆ ಸುಪ್ರೀಂಕೋರ್ಟ್‌ ನೀಡಿರುವ ತಡೆ ಆಜ್ಞೆಯನ್ನು ತೆರವುಗೊಳಿಸಬೇಕು. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಜಾತಿ, ಧರ್ಮ ಇನ್ನಿತರ ತಾರತಮ್ಯ ಆಗುತ್ತಿರುವುದನ್ನು ತಡೆಗಟ್ಟಲು ಮಾಡಿರುವ ಯುಜಿಸಿ ನಿಯಮಾವಳಿಗನ್ನು ಜಾರಿ ತರಬೇಕು, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಿಯಮಾವಳಿಗಳು ಯುಜಿಸಿ ಹೊರಡಿಸಬೇಕು’ ಎಂದು ಮನವಿ ಮಾಡಿದರು.

ಡಿಎಸ್‌ಎಸ್‌ ಮುಖಂಡರಾದ ರಮೇಶ ಧರಣಾಕರ, ಮಹಾಂತೇಶ ಸಾಸಬಾಳ, ಸಂತೋಷ ಮಣಗಿರಿ, ಅರುಣ ಗವಾರಿ, ಗೋಪಾಲ್ ಪೂಜಾರಿ, ಪರಶುರಾಮ್ ಇಂಗಳಗೇರಿ, ಅವಿನಾಶ ಬಾನಿಕೋಲ, ದೊಡ್ಡಪ್ಪ ನಾಟೀಕರ, ನಾಗಾವಿ, ಮಹಾಂತೇಶ್ ಚಲವಾದಿ, ಸಿದ್ದಾರ್ಥ ರೂಗಿ, ಬಾಬು ಗುಡಮಿ ಇದ್ದರು.

ಯುಜಿಸಿ ತಂದಿರುವ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ನೀಡಿರುವ ತಡೆ ಆಜ್ಞೆ ತೆರವುಗೊಳಸಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕು   
ಸಿದ್ದು ರಾಯಣ್ಣವರ ಜಿಲ್ಲಾ ಸಂಚಾಲಕ ಡಿಎಸ್ಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.