ಚಡಚಣ ಸಮೀಪದ ಶಿರನಾಳ –ಔಜ ಮಧ್ಯದ ಭೀಮಾ ನದಿಗೆ ನಿರ್ಮಿಸಲಾದ ಬಾಂದಾರ ಮುಳುಗಡೆಯಾಗಿರುವದು
ಚಡಚಣ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಮಂಗಳವಾರ ಒಂದು ಲಕ್ಷ ಕ್ಯೂಸೆಕ್ ನೀರು ಬಿಟ್ಟಿರುವದರಿಂದ ರಾಜ್ಯ ಗಡಿ ಅಂಚಿನಲ್ಲಿ ಹಾದು ಹೋಗಿರುವ ಭೀಮಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭೀಮಾ ನದಿಗೆ ಕರ್ನಾಟಕ ಮಹಾರಾಷ್ಟ್ರ ಸರ್ಕಾರಗಳು ನಿರ್ಮಿಸಿರುವ ಜಂಟಿಯಾಗಿ ನಿರ್ಮಿಸಿರುವ 8 ಬಾಂದಾರ ಕಮ್ ಬ್ರಿಜ್‌ಗಳು ಜಲಾವೃತಗೊಂಡಿವೆ.ಈ ಬಾಂದಾರಗಳ ಮೂಲಕ ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಂಪರ್ಕ ಕಡಿತಗೊಂಡಿವೆ.
ಭೀಮಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವದರಿಂದ ನದಿ ತೀರದಲ್ಲಿ ವಾಸವಾಗಿರುವ ಜನರಿಗೆ ಸುರಕ್ಷಿತ ತಾಣಗಳತ್ತ ತೆರಳಲು ಈಗಾಗಲೇ ಸೂಚಿಸಲಾಗಿದೆ. ಸಂಭಾವ್ಯ ಪ್ರವಾಹ ಎದುರಿಸಲು ಬುಧವಾರ ಸ್ಥಳಿಯ ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಬುಧವಾರ ಪ್ರವಾಹ ಪರಿಸ್ಥಿತಿ ನಿಯಂತ್ರಣ ತಾಲ್ಲೂಕು ನೋಡಲ್ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ತಹಶೀಲ್ದಾರ ಸಂಜಯ ಇಂಗಳೆ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ ಖಡಗೇಕರ ತಾಲೂಕಿನ ನೋಡಲ ಅಧಿಕಾರಿಗಳು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಂದಾಯ ನಿರೀಕ್ಷಕರು ಗ್ರಾಮ ಆಡಳಿತ ಅಧಿಕಾರಿಗಳ ಪಾಲ್ಗೊಂಡಿದ್ದರು. ಮುಂಬರುವ ಮಳೆ ಹಾಗೂ ಭೀಮಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆಯಾದ ಕಾರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಿಲಾಯಿತು.
ಭೀಮಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು,ಮುಂಜಾಗೃತಾ ಕ್ರಮವಾಗಿ ನದಿ ತೀರದ ಗ್ರಾಮಗಳಲ್ಲಿ ಡಂಗುರ ಸಾರಿ,ಸುರಕ್ಷಿತ ತಾಣಗಳಿಗೆ ಜನರು ತಮ್ಮ ಸಾಮಾನು,ಸರಂಜಾಮುಗಳು ಹಾಗೂ ಜಾನುವಾರುಗಳೊಂದಿಗೆ ತೆರಳಲು ಸೂಚಿಸಲಾಗಿದೆ ಎಂದು ಚಡಚಣ ತಹಶಿಲ್ದಾರ್ ಸಂಜಯ ಇಂಗಳೆ ತಿಳಿಸಿದ್ದಾರೆ.
ರಾಜ್ಯದ ಧೂಳಖೆ ಹಾಗೂ ಟಾಕಳು ಗ್ರಾಮಗಳ ಮಧ್ಯ ಹಾದು ಹೋಗಿರುವ ಭೀಮಾ ನದಿ ತುಂಬಿ ಹರಿಯುತ್ತಿರುವದು
ಮಹಾರಾಷ್ಟ್ರದ ಮಾಚನೂರ ದೇವಾಲಯದ ಪಕ್ಕದಲ್ಲಿ ಹಾದು ಹೋಗಿರುವ ಭೀಮಾ ನದಿಯಲ್ಲಿ ಸಿದ್ಧೇಶ್ವರ ದೇವಾಲಯ ಜಲಾವೃತಗೊಂಡಿರುವದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.