ತೇರದಾಳ: ತಾಲ್ಲೂಕಿನ ಸಸಾಲಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಹಾಗೂ ಮುಖ್ಯ ದ್ವಾರದ ಬಳಿ ಪಾನ್ ಬೀಡಾ ಗೂಡಂಗಡಿಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಲು ಸ್ಥಳೀಯ ಗ್ರಾಮ ಪಂಚಾಯ್ತಿ ಮೀನಮೇಷ ಎನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮದ ಸರ್ಕಾರಿ ಶಾಲೆ ಶತಮಾನದ ಹೊಸ್ತಿಲಲ್ಲಿದ್ದು, ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆತಂಕ ಗ್ರಾಮಸ್ಥರಲ್ಲಿದೆ. ಇಲ್ಲಿ ಅಂಗಡಿ ಆರಂಭಿಸುವುದರಿಂದ ಜನರು, ವಾಹನ ದಟ್ಟಣೆಯಾಗುತ್ತದೆ. ಶಾಲೆಗೆ ಆಗಮಿಸುವ ಶಿಕ್ಷಕಿಯರಿಗೆ ಹಾಗೂ ಬಾಲಕಿಯರಿಗೆ ಮುಜುಗರವಾಗುವ ಸಾಧ್ಯತೆಯಿದೆ. ಅಲ್ಲದೆ ಶಾಲೆಯ ಆವರಣದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಗುಟಕಾದಂತಹ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬೇಕು ಎಂಬ ಆದೇಶವಿದ್ದರೂ ಅದನ್ನು ಜಾರಿಗೊಳಿಸುವಲ್ಲಿ ಗ್ರಾಮ ಪಂಚಾಯ್ತಿ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲಾ ಕಾಂಪೌಂಡ್ ಗೋಡೆಗೆ ತಾಗಿದಂತೆ ಈ ಮೊದಲು ಒಂದು ಅಂಗಡಿ ಇದ್ದು, ಈಗ ಇನ್ನೊಂದು ಗೂಡಂಗಡಿಯನ್ನು ಗೇಟ್ ಬಳಿಯೇ ಇರಿಸಲಾಗಿದ್ದು, ಅಂಗಡಿ ಆರಂಭವಾದರೆ ಅಲ್ಲಿ ಜನದಟ್ಟಣೆಯಾಗುತ್ತದೆ. ಇದಲ್ಲದೆ ಅದರ ಪಕ್ಕದಲ್ಲಿಯೇ ಒಂದು ಬೆಂಚ್ ಕೂಡ ಹಾಕಿದ್ದು, ಮಧ್ಯಾಹ್ನ ಹೊತ್ತಿನಲ್ಲಿ ಶಾಲಾ ಆವರಣದಲ್ಲಿನ ಗಿಡಗಳ ನೆರಳು ಅಲ್ಲಿರುವುದರಿಂದ ಗೇಟ್ ಮುಂದೆಯೆ ಬೈಕುಗಳನ್ನು ನಿಲ್ಲಿಸುವುದು ಸಾಮಾನ್ಯವಾಗಿದೆ. ಇದರಿಂದ ಶಾಲೆಯ ಒಳಗೆ ಹಾಗೂ ಹೊರಗೆ ಹೋಗಲು ಮಕ್ಕಳಿಗೆ, ಶಿಕ್ಷಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಭಾನುವಾರ ಜು. 13ರ ರಾತ್ರಿ ಗೇಟ್ ಬಳಿ ಗೂಡಂಗಡಿ ಇರಿಸಲಾಗಿದ್ದು, ಮರುದಿನವೇ ಅವುಗಳನ್ನು ತೆರವುಗೊಳಿಸುವಂತೆ ಶಾಲಾ ಎಸ್‌ಡಿಎಂಸಿ ಸದಸ್ಯರು ಹಾಗೂ ಶಾಲೆಯ ಮುಖ್ಯ ಗುರುಗಳು ಗ್ರಾಮ ಪಂಚಾಯ್ತಿಗೆ ಮನವಿ ಪತ್ರ ನೀಡಿದ್ದಾರೆ. ಇಲ್ಲಿಯವರೆಗೆ ಗ್ರಾಮಾಡಳಿತ ಶಾಲೆಯತ್ತ ತಲೆ ಕೂಡ ಹಾಕಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಹೋಸ್ತೋಟ ದೂರಿದ್ದಾರೆ.
`ಶಾಲೆಯವರು ಮನವಿ ಸಲ್ಲಿಸಿ ಎರಡು ದಿನದಲ್ಲಿ ಕ್ರಮ ತೆಗೆದುಕೊಳ್ಳಲು ಹೇಗೆ ಸಾಧ್ಯ? ಗ್ರಾಮ ಪಂಚಾಯ್ತಿ ಸಭೆ ಕರೆದು ಅಲ್ಲಿ ತೀರ್ಮಾನಿಸಿ ನಂತರ ಕ್ರಮ ಕೈಗೊಳ್ಳಲಾಗುವುದು' ಎಂದು ಪಿಡಿಒ ಎನ್.ಎಸ್.ಪತ್ರಿಮಠ ಪ್ರತಿಕ್ರಿಯಿಸಿದರು.
`ಶಾಲೆಯವರು ಮನವಿ ಕೊಟ್ಟಿದ್ದು ಗಮನಕ್ಕಿದೆ. ಮುಂದಿನ ಸಭೆಯಲ್ಲಿ ಎಲ್ಲ ಸದಸ್ಯರ ಜೊತೆ ಚರ್ಚೆ ಮಾಡಿ ಕ್ರಮಕ್ಕೆ ಮುಂದಾಗುತ್ತೇವೆ' ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿದ್ಯಾಶ್ರೀ ಶೇಗುಣಶಿ ಪ್ರತಿಕ್ರಿಯಿಸಿದರು.
ಗ್ರಾಮ ಪಂಚಾಯ್ತಿ ನಿರಾಸಕ್ತಿ: ಈ ಶಾಲೆಗೆ 9 ವರ್ಷಗಳ ಕಾಲ ಎಸ್‌ಡಿಎಂಸಿ ರಚನೆಯಾಗಿರಲಿಲ್ಲ. ಈ ಕುರಿತು ಶಾಲಾ ಶಿಕ್ಷಕರು ಹಲವು ಬಾರಿ ಗ್ರಾಮ ಪಂಚಾಯ್ತಿಗೆ ಮನವಿ ಪತ್ರ ಬರೆದರು ಸ್ಪಂದಿಸಿರಲಿಲ್ಲ. ಕೊನೆಗೆ ಶಾಲೆಯ ಹಿರಿಯ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಎಸ್‌ಡಿಎಂಸಿ ರಚನೆಯಾಯಿತು. ಅಲ್ಲಿಯವರೆಗೆ ಕಡಿಮೆಯಾಗಿದ್ದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತ ಹೋಯಿತು. ಶಾಲೆಯ ಕೊಠಡಿಗಳನ್ನು ಗ್ರಾಮ ಪಂಚಾಯ್ತಿ ಗ್ರಂಥಾಲಯ, ಮಕ್ಕಳ ಮನೆ, ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘ ಹೀಗೆ ಅನ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿದೆ, ಇದರಿಂದಲೂ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಅಲ್ಲಿನ ಶೌಚಾಲಯ, ಶಾಲಾ ಮೈದಾನ ಅಭಿವೃದ್ಧಿ ಮಾಡಲು ಹಿಂದೇಟು ಹಾಕುತ್ತ ಬಂದಿದೆ. ಶಾಲೆಯೊಳಗಿನ ಕೊಳವೆ ಬಾವಿಯ ನೀರು ಸಾರ್ವಜನಿಕ ಬಳಕೆಗೆ ಗ್ರಾಮ ಪಂಚಾಯ್ತಿಯೆ ಅವಕಾಶ ಮಾಡಿಕೊಟ್ಟಿದೆಯೆಂದು ಎಸ್‌ಡಿಎಂಸಿ ಸದಸ್ಯ ಈರಪ್ಪ ಕಾಂಬಳೆ ಆಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.