ADVERTISEMENT

ಜನಾಕರ್ಷಿಸಿದ ವಚನ ನೃತ್ಯ ರೂಪಕ..!

ಬಸವನಬಾಗೇವಾಡಿಯ ರಾಷ್ಟ್ರೀಯ ಬಸವೋತ್ಸವದಲ್ಲಿ ವಚನ ಗಾಯನ–ನೃತ್ಯ ರೂಪಕ

ಪ್ರಕಾಶ ಎನ್.ಮಸಬಿನಾಳ
Published 11 ಮೇ 2019, 19:45 IST
Last Updated 11 ಮೇ 2019, 19:45 IST
ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವೋತ್ಸವದಲ್ಲಿ ಜನಾಕರ್ಷಿಸಿದ ವಚನ ನೃತ್ಯ ರೂಪಕ
ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವೋತ್ಸವದಲ್ಲಿ ಜನಾಕರ್ಷಿಸಿದ ವಚನ ನೃತ್ಯ ರೂಪಕ   

ಬಸವ ಜಯಂತಿ ಅಂಗವಾಗಿ ಬಸವನಬಾಗೇವಾಡಿಯ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ‘ರಾಷ್ಟ್ರೀಯ ಬಸವೋತ್ಸವ’ದಲ್ಲಿ, ಆಕಾಶವಾಣಿ ಕಲಾವಿದ ಬಸವರಾಜ ಬಂಟನೂರ ಅವರ ವಚನ ಗಾಯನ, ಧಾರವಾಡದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಚನ ನೃತ್ಯ ರೂಪಕ ಪ್ರೇಕ್ಷಕರನ್ನು ಮಂತ್ರ ಮಗ್ಧರನ್ನಾಗಿಸಿತು.

ಬಸವಣ್ಣನವರ ನಾದಪ್ರಿಯ ಶಿವನಲ್ಲ, ವೇದಪ್ರಿಯ ಶಿವನಲ್ಲ... ಅಕ್ಕಮಹಾದೇವಿಯ ಚನ್ನಮಲ್ಲಿಕಾರ್ಜುನ ಎಲ್ಲಿದ್ದಾನೆ ಹೇಳಿರಿ ಸೇರಿದಂತೆ ವಿವಿಧ ವಚನಗಳಿಗೆ 12 ಭರತನಾಟ್ಯ ಕಲಾವಿದೆಯರು ನೃತ್ಯ ರೂಪಕದ ಮೂಲಕ ಅತ್ಯದ್ಭುತ ಪ್ರದರ್ಶನ ನೀಡಿದರು. ವಚನಾಮೃತವನ್ನು ಜನರ ಮನಕ್ಕೆ ಮುಟ್ಟಿಸಿದರು.

ಕಲಾವಿದೆಯರ ಹಾವಭಾವ, ನೃತ್ಯದ ಭಂಗಿ, ನೃತ್ಯ ರೂಪಕದ ಸಂದರ್ಭಕ್ಕೆ ತಕ್ಕಂತೆ ವಿವಿಧ ಬಣ್ಣಗಳ ವಿದ್ಯುತ್ ದೀಪದ ಬೆಳಕಿನ ಸಂಯೋಜನೆ ಕಣ್ತುಂಬಿಕೊಂಡ ಪ್ರೇಕ್ಷಕ ಸಮೂಹ, ಸ್ಪಷ್ಟವಾಗಿ ಮೂಡಿ ಬಂದ ವಚನಗಳನ್ನು ಆಲಿಸಿ ಮೆಚ್ಚುಗೆ ಸೂಚಿಸಿತು.

ADVERTISEMENT

ಭರತನಾಟ್ಯಕ್ಕೆ ವಚನ..!

ಧಾರವಾಡದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಕಲಾ ಶಾಲೆಯ ಸಂಸ್ಥಾಪಕ ಸಂಚಾಲಕರಾದ ನಾಗರತ್ನಾ ಎನ್.ಹಡಗಲಿ, 24 ವರ್ಷದ ಹಿಂದೆಯೇ ಭರತನಾಟ್ಯ ಶಾಲೆ ಆರಂಭಿಸಿದ್ದಾರೆ. ಬಸವಾದಿ ಶರಣರ ವಚನಗಳಿಂದ ಪ್ರಭಾವಿತರಾಗಿ, ನೃತ್ಯ ರೂಪಕದ ಮೂಲಕ ಶರಣರ ಸಂದೇಶಗಳನ್ನು ದೇಶ–ವಿದೇಶಗಳಲ್ಲಿ ಪ್ರಚುರ ಪಡಿಸುವ ಕೆಲಸವನ್ನು 18 ವರ್ಷಗಳಿಂದ ಮಾಡುತ್ತಿದ್ದಾರೆ.

ಭರತನಾಟ್ಯ ಸೇರಿದಂತೆ, ಕಥಕ್‌, ಕೂಚುಪುಡಿ ಹಾಗೂ ಜಾನಪದ ಶೈಲಿಯ ನೃತ್ಯ ರೂಪಕದ ಮೂಲಕ ಇದುವರೆಗೂ ದೇಶ–ವಿದೇಶಗಳಲ್ಲಿ 1600ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಇವರ ನೃತ್ಯ ರೂಪಕ ತಂಡದಲ್ಲಿ 40ರಿಂದ 50 ಕಲಾವಿದರು ಪಾಲ್ಗೊಳ್ಳುತ್ತಿರುವುದು ವಿಶೇಷ.

15ಕ್ಕೂ ಹೆಚ್ಚು ಶರಣರ 1150 ವಚನಗಳಿಗೆ ನೃತ್ಯ ಸಂಯೋಜನೆ ಮಾಡಿರುವ ನಾಗರತ್ನಾ, ಆಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇವರ ನೃತ್ಯ ರೂಪಕ ತಂಡದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಎಲ್.ಎಲ್.ಬಿ ಪದವಿ ಸೇರಿದಂತೆ ವಿವಿಧ ಪದವಿ ತರಗತಿಯಲ್ಲಿ ಅಧ್ಯಯನದಲ್ಲಿ ತೊಡಗಿಕೊಂಡಿರುವವರು ಇದ್ದಾರೆ.

ನೃತ್ಯ ರೂಪಕ ತಂಡದಲ್ಲಿರುವ ಡಾ.ಸಮತಾ ವೈದ್ಯರಾಗಿದ್ದರೂ; ಭರತನಾಟ್ಯ ಪ್ರವೀಣರು. ವಚನಗಳಿಂದ ಪ್ರಭಾವಿತರಾಗಿ ನೃತ್ಯ ರೂಪಕಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ.

ಶರಣರ ಸಂದೇಶಗಳನ್ನು ವಿಭಿನ್ನ ರೀತಿಯಲ್ಲಿ ಜನರ ಮನ ಮುಟ್ಟುವ ಹಾಗೆ ತಲುಪಿಸುವ ಕಾರ್ಯವನ್ನು ಈ ತಂಡ ಮಾಡುತ್ತಿದೆ. 2014ರಲ್ಲಿ ಧಾರವಾಡದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 211 ನೃತ್ಯ ಕಲಾವಿದರು, ಬೆಳಿಗ್ಗೆ 6.-30ರಿಂದ ರಾತ್ರಿ 9 ಗಂಟೆವರೆಗೆ, 111 ವಚನಗಳನ್ನು ನೃತ್ಯ ರೂಪಕದ ಮೂಲಕ ಪ್ರದರ್ಶನ ನೀಡಿದ ಹೆಗ್ಗಳಿಕೆ ಈ ತಂಡದ್ದು.

2016ರಲ್ಲಿ ಧಾರವಾಡದಲ್ಲಿ ನಡೆದ ಎರಡು ದಿನದ ಅಖಿಲ ಕರ್ನಾಟಕ ವಚನ ವಿಮರ್ಶಾ ಸಮ್ಮೇಳನದಲ್ಲಿ ಶರಣರ ಕುರಿತಾದ ಗೋಷ್ಠಿ, ಸಂಗೀತೋತ್ಸವ ನಡೆಸುವ ಮೂಲಕ ವಚನಗಳ ಮಹತ್ವ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ನಾಗರತ್ನಾ.

ಇವರ ಭರತನಾಟ್ಯ ಶಾಲೆಯಲ್ಲಿ ಪ್ರಾಥಮಿಕ ಶಾಲೆಯಿಂದ ಪದವಿವರೆಗಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಧಾರವಾಡ, ಗೋಕಾಕ, ಬೈಲಹೊಂಗಲ ಶಾಖೆಗಳಲ್ಲಿ 650ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. ಭರತನಾಟ್ಯ ಕಲಾ ಶಾಲೆಯ ಸಂಪರ್ಕ ಸಂಖ್ಯೆ: 9880729284, 9880729274.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.