
ವಿಜಯಪುರ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳಿದ್ದು, ವಚನಗಳ ಮೂಲಕ ಸಮಾಜವನ್ನು ತಿದ್ದುವಲ್ಲಿ ಶ್ರಮಿಸಿದ ಎಲ್ಲ ಬಸವಾದಿ ಶರಣರನ್ನು ಸ್ಮರಿಸುವ ಕಾಯಕ ನಿತ್ಯ ನಿರಂತರವಾಗಿ ನಡೆಯಬೇಕು ಎಂದು ವಿಶ್ರಾಂತ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ವೈ. ಕೊಣ್ಣೂರ ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಸಭಾಂಗಣದಲ್ಲಿ ಭಾನುವಾರ ಜರುಗಿದ ವಿವಿಧ ದತ್ತಿನಿಧಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
‘ವಚನ ಸಾಹಿತ್ಯ ಕಾಯಕ, ದಾಸೋಹ, ಮಾನವೀಯತೆ, ಸಮಾನತೆಗೆ ಹೆಚ್ಚು ಒತ್ತು ನೀಡಿದೆ. ವಚನಕಾರರ ಆದರ್ಶ ಬದುಕನ್ನು ಅರಿತು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಇಂದಿನ ಯುವಕರು ಹಗಲಿರುಳು ಜ್ಞಾನಾರ್ಜನೆ ಮಾಡಿ ಬದುಕನ್ನು ಕಟ್ಟಿಕೊಳ್ಳಬೇಕು’ ಎಂದರು.
ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಜಿಲ್ಲಾ ಕಸಾಪ ಇಂದು ಜಿಲ್ಲೆಯಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮನೆಮಾತಾಗಿದೆ. ಕನ್ನಡ ನಾಡು ನುಡಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ, ದತ್ತಿ ಗೋಷ್ಠಿಗಳಿಗೆ ಜೀವ ತುಂಬುವ ಕಾಯಕವನ್ನು ಶ್ರದ್ಧೆಯಿಂದ ನೆರವೇರಿಸುತ್ತಿರುವುದು ನಾಡಿನ ಗೌರವ ಹೆಚ್ಚಿಸಿದೆ’ ಎಂದರು.
ಸಾಹಿತಿ ಶೋಭಾ ಮೇಡೆಗಾರ ಮಾತನಾಡಿ, ‘ವಚನ ಸಾಹಿತ್ಯ ನಮ್ಮೆಲ್ಲರ ಬದುಕಿಗೆ ದಿಕ್ಸೂಚಿಯಾಗಿದೆ. ವಚನಗಳ ಮೂಲಕ ಸಮಾಜದ ಆದರ್ಶ ನೀತಿ ತತ್ವಗಳನ್ನು ವಚನಕಾರರು ನಿರೂಪಿಸಿದ್ದಾರೆ. ಅವುಗಳ ಸಾರವನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಜೀವನ ರೂಪಿಸಿಕೊಳ್ಳೋಣ’ ಎಂದರು.
‘ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ನಿರಂತರ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲ ನಮ್ಮಲ್ಲಿ ಅಚಲವಾಗಿರಬೇಕು ಅಂದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ’ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ಬಿ.ಎಂ.ಅಜೂರ, ಜಿ.ಎಸ್.ಬಳ್ಳೂರ, ಲತಾ ಗುಂಡಿ, ಗಂಗಮ್ಮ ರಡ್ಡಿ, ವಿಜಯಲಕ್ಷ್ಮಿ ಹಳಕಟ್ಟಿ, ಶರಣಮ್ಮ ಹಾದಿಮನಿ, ಶಿವಾಜಿ ಮೋರೆ, ಶ್ರೀಕಾಂತ ನಾಡಗೌಡ, ಕೆ.ಎಸ್.ಹಣಮಾಣಿ, ಬಿ.ಎಂ. ಮಸಬಿನಾಳ, ಫಕ್ರುದ್ದೀನ್ ಅಲಿಅಹ್ಮದ ಹಿರೇಕೊಪ್ಪ, ಮಂಜುಳಾ ಕಾಳಗಿ, ಸಿದ್ರಾಮಪ್ಪ ಜಂಗಮಶೆಟ್ಟಿ, ಬಸವರಾಜ ಹಿರೇಮಠ, ಬಸವರಾಜ ಕೋನರಡ್ಡಿ, ಮಹಾದೇವಿ ತೆಲಗಿ, ಎನ್.ಜಿ. ಕೋಟ್ಯಾಳ, ಜಯಶ್ರೀ ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.