ADVERTISEMENT

ಆಧ್ಯಾತ್ಮಿಕ ಜೀವನವೂ ಒಂದು ಬಗೆಯ ಕೃಷಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 11:57 IST
Last Updated 23 ಅಕ್ಟೋಬರ್ 2020, 11:57 IST
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ
ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ   

ಅಲ್ಲಮಪ್ರಭುಗಳು ಮಾರ್ಮಿಕವಾದ ವಚನದ ಮೂಲಕ ಜನರ ಅಜ್ಞಾನ, ಅಂಧಕಾರವನ್ನು ಕಳೆದು ಜ್ಞಾನಿಗಳನ್ನಾಗಿ ಮಾಡಿದ್ದಾರೆ. ಅವರ ಅಭಿಪ್ರಾಯದಲ್ಲಿ ಆಧ್ಯಾತ್ಮ ಜೀವನವು ಒಂದು ಬಗೆಯ ಕೃಷಿ ಇದ್ದಂತೆ.

‘ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ, ಅಗೆದು ಕಳೆದನಯ್ಯಾ ಭ್ರಾಂತಿ ಎಂಬ ಬೇರ, ಒಡೆದು ಸಂಸಾರದ ಹೆಂಟೆಯ ಬಗಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ. ಅಖಂಡ ಮಂಡಲವೆಂಬ ಬಾವಿ, ಪವನವೆ ರಾಟಾಳ ಸುಷುಮ್ನನಾಳದಿಂದ ಉದಕವ ತಿದ್ದಿ, ಬಸವಗಳೈವರು ಹಸನಗೆಡಿಸಿಹವೆಂದು ಸಮೇತ ಸೈರಣೆಯೆಂಬ ಬೇಲಿಯನಿಕ್ಕಿ ಅವಾಗಳೂ ಈ ತೋಟದಲ್ಲಿ ಜಾಗವಿದ್ದು ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ..’

ಅಂದರೆ, ರೈತರು ಭೂಮಿ ಎಂಬ ಕ್ಷೇತ್ರದಲ್ಲಿ ಭೌತಿಕ ಬೆಳೆಯನ್ನು ತೆಗೆಯುವುದಾದರೆ ಆಧ್ಯಾತ್ಮಿಕ ಜೀವನವು ಶರೀರ ಎಂಬ ಕ್ಷೇತ್ರದಲ್ಲಿ ಪಾರಮಾರ್ಥದ ಬೆಳೆಯನ್ನು ತೆಗೆಯಲು ಸಾಧನವಾಗುವುದು. ಶರೀರವೇ ತೋಟ, ಮನಸ್ಸೇ ಗುದ್ದಲಿ, ಮನಸ್ಸೆಂಬ ಗುದ್ದಲಿವಿಡಿದು ಭ್ರಾಂತಿ ಎಂಬ ಕರಿಕೆಯ ಬೇರನ್ನು ತೆಗೆಯಬೇಕು. ನಾನು, ನನ್ನಿಂದ ನನಗೆ ಎಂಬ ಸಂಸಾರ ಮೋಹದ ಮಣ್ಣಿನ ಹೆಂಟೆಗಳನ್ನು ಒಡೆಯಬೇಕು. ನಂತರ ಬ್ರಹಜ್ಞಾನದ ಬೀಜವ ಬಿತ್ತಬೇಕು. ಸಂಸಾರ ಚಕ್ರದ ಅಡಿಯಲ್ಲಿರುವ ಆಧಾರ ಚಕ್ರದಲ್ಲಿರುವ ಕುಂಡಲಿನಿ ಶಕ್ತಿಯನ್ನು ವಾಯುವಿನ ಮೂಲಕ ಎತ್ತಿ ಸುಷುಮ್ನಾನಾಳದ ಮೂಲಕ ಮೇಲಕ್ಕೆ ಒಯ್ಯಬೇಕು.

ADVERTISEMENT

ಆಧ್ಯಾತ್ಮಿಕ ದಿವ್ಯಾನುಭವದ ಸಸಿ ಮೇಲೇಳುತ್ತಿದ್ದಂತೆಯೇ ಪಂಚಜ್ಞಾನೇಂದ್ರಿಯಗಳೆಂಬ ದನಗಳು ಆ ಸಸಿಯನ್ನು ತಿಂದು, ತುಳಿದು ಹಾಳು ಮಾಡುವ ಸಂಭವವುಂಟು. ಅದಕ್ಕೆ ಸಮೇತ ಸೈರಣೆಯೆಂಬ ಬೇಲಿಯನಿಕ್ಕಿ ಜಾಗೃತ ಸ್ಥಿತಿಯಿಂದ ಕಾಯ್ದು ಆಧ್ಯಾತ್ಮಿಕ ಅನುಭವವನ್ನು ರಕ್ಷಿಸಿಕೊಳ್ಳಬೇಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.