ಮುದ್ದೇಬಿಹಾಳ : ಅ.7ರಂದು ವಾಲ್ಮೀಕಿ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಕೀರ್ತಿ ಚಾಲಕ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವರ್ಷದ ಆಚರಣೆಯ ಮಾದರಿಯಲ್ಲಿಯೇ ಈ ವರ್ಷವೂ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಸಮಾಜದ ಅಧ್ಯಕ್ಷ ಬಲಭೀಮ ನಾಯ್ಕಮಕ್ಕಳ, ಮುಖಂಡ ಶಿವು ಕನ್ನೊಳ್ಳಿ , ಜಯಂತಿ ಕಾರ್ಯಕ್ರಮದ ದಿನ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರುವಂತೆ ಹಾಗೂ ಎಸ್.ಟಿ ಸಮುದಾಯದ ಮಕ್ಕಳನ್ನೇ ಪ್ರಮಾಣ ಪತ್ರ ಪರಿಶೀಲನೆ ನಡೆಸಿ ಅಂತಹ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಇಒ ವೆಂಕಟೇಶ ವಂದಾಲ ಮಾತನಾಡಿ, ಸಮಾಜದವರ ಆಶಯದಂತೆ ಜಯಂತಿ ಕಾರ್ಯಕ್ರಮ ಆಚರಿಸಲಾಗುವುದು. ಯಾವುದೇ ಗೊಂದಲಗಳಿಗೆ ಆಸ್ಪದ ಕೊಡದೆ ಜಯಂತಿ ನಡೆಸಲಾಗುತ್ತದೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ, ಪೊಲೀಸ್ ಇಲಾಖೆಯ ಆರ್.ಎಲ್.ಮನ್ನಾಭಾಯಿ,ವಾಲ್ಮೀಕಿ ಸಮಾಜದ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಇದ್ದರು.
ಕ್ಷಮೆಯಾಚನೆ : ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ವಿವಿಧ ಜವಾಬ್ದಾರಿಗಳ ಹಂಚಿಕೆ ಮಾಡುತ್ತಿರುವ ವೇಳೆ ಅಬಕಾರಿ ಇಲಾಖೆಯ ಅಧಿಕಾರಿ ಜ್ಯೋತಿಬಾಯಿ ಮೇತ್ರಿ ‘ನಮ್ಮ ಇಲಾಖೆಯಿಂದ ಯಾವುದೇ ಅನುದಾನ ಜಯಂತಿಗಳಿಗೆ ಕೊಡುವುದಿಲ್ಲ. ನಮ್ಮ ಇಲಾಖೆಗೆ ಯಾವುದೇ ಜವಾಬ್ದಾರಿ ಬೇಡ ಎಂದು ಕಳೆದ ಎರಡು ಸಭೆಗಳಲ್ಲಿ ಹೇಳುತ್ತ ಬಂದಿದ್ದರೂ ನಮಗೆ ಪದೇ ಪದೇ ಜವಾಬ್ದಾರಿ ನೀಡಲಾಗುತ್ತಿದೆ’ ಎಂದು ಹೇಳುತ್ತಿದ್ದಂತೆ ಅಸಮಾಧಾನಗೊಂಡ ವಾಲ್ಮೀಕಿ ಸಮಾಜದ ಮುಖಂಡರು, ದಲಿತಪರ ಸಂಘಟನೆ ಮುಖಂಡರು ಅಧಿಕಾರಿ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿ ಅವರ ವಿರುದ್ಧ ಧಿಕ್ಕಾರದ ಘೋಷಣೆಯನ್ನೂ ಕೂಗಿದರು.
ಕೆಲವು ಮುಖಂಡರು ಅಧಿಕಾರಿ ಇಲ್ಲಿ ಕೂರುವುದು ಬೇಡ ಹೊರಗೆ ಕಳುಹಿಸಿ ಎಂದಾಗ, ಮತ್ತೆ ಪ್ರತಿಕ್ರಿಯಿಸಿದ ಅಧಿಕಾರಿ ಮೇತ್ರಿ ‘ನಾನು ನಿಮ್ಮ ಆದೇಶ ಪಾಲನೆ ಮಾಡುವುದಕ್ಕೆ ಬಂದಿಲ್ಲ. ನಮ್ಮ ಮೇಲಾಧಿಕಾರಿಗಳು ಹೇಳುವುದನ್ನು ಕೇಳುವುದಕ್ಕೆ ಬಂದಿದ್ದೇನೆ’ ಎನ್ನುತ್ತಿದ್ದಂತೆ ಕೋಪಗೊಂಡ ಮುಖಂಡರು ಇಲಾಖೆಯ ಅಧಿಕಾರಿ ವಿರುದ್ಧ ಪ್ರತಿಭಟಿಸಲು ಮುಂದಾದರು.
ಆಗ ಮಧ್ಯೆಪ್ರವೇಶಿಸಿದ ತಹಶೀಲ್ದಾರ್ ಕೀರ್ತಿ ಚಾಲಕ, ತಾಲ್ಲೂಕು ಪಂಚಾಯಿತಿ ಇಒ ವೆಂಕಟೇಶ ವಂದಾಲ ಸಮಾಜದವರು ಅಪೇಕ್ಷೆ ಪಟ್ಟಂತೆ ಜಯಂತಿ ಮಾಡಲಾಗುತ್ತದೆ. ಅದಕ್ಕೆ ಗೊಂದಲಗಳು ಬೇಡ. ಹಣಕಾಸಿನ ವಿಚಾರಕ್ಕೆ ನೀವು ತಲೆಕೆಡಿಸಿಕೊಳ್ಳುವುದು ಬೇಡ. ಜಯಂತಿ ಕುರಿತು ಸಲಹೆ ನೀಡಿ ಎಂದು ಎಲ್ಲರನ್ನು ಸಮಾಧಾನಪಡಿಸಿದರಲ್ಲದೇ ಅಬಕಾರಿ ಇಲಾಖೆ ಅಧಿಕಾರಿ ಆಡಿದ ಮಾತಿಗೆ ಕ್ಷಮೆಯಾಚಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.