ADVERTISEMENT

ವೀರಶೈವ ಶ್ರೇಷ್ಠ ಧರ್ಮ: ಸಚಿವ ಶಿವಾನಂದ ಎಸ್. ಪಾಟೀಲ

ಪ್ರವಚನ ಕಾರ್ಯಕ್ರಮ: ಸಚಿವ ಶಿವಾನಂದ ಎಸ್. ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 4:59 IST
Last Updated 8 ಡಿಸೆಂಬರ್ 2025, 4:59 IST
ಇಂಡಿ ನಗರದ ಹಳೆ ಸಾಲೋಟಗಿ ರಸ್ತೆಯಲ್ಲಿ ಶಿರಶ್ಯಾಡ ಶಾಖಾ ಮಠದ ಆವರಣದಲ್ಲಿ ಬಡ ಮಕ್ಕಳ ಉಚಿತ ಪ್ರಸಾದ ಹಾಗೂ ವಸತಿ ನಿಲಯ ಕಟ್ಟಡದ ಹೊಸ್ತಿಲ ಪೂಜಾ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು
ಇಂಡಿ ನಗರದ ಹಳೆ ಸಾಲೋಟಗಿ ರಸ್ತೆಯಲ್ಲಿ ಶಿರಶ್ಯಾಡ ಶಾಖಾ ಮಠದ ಆವರಣದಲ್ಲಿ ಬಡ ಮಕ್ಕಳ ಉಚಿತ ಪ್ರಸಾದ ಹಾಗೂ ವಸತಿ ನಿಲಯ ಕಟ್ಟಡದ ಹೊಸ್ತಿಲ ಪೂಜಾ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಿದರು   

ಇಂಡಿ: ‘ವೀರಶೈವ ಮಠಾಧೀಶರು ಜಾತಿ, ಧರ್ಮ, ಮತ, ಪಂಥ ಎನ್ನದೆ ಸರ್ವರಿಗೂ ಸಮಾನತೆಯಿಂದ ಕಾಣುತ್ತಾರೆ. ಹೀಗಾಗಿ ವೀರಶೈವ ಧರ್ಮ ಅತಿ ಶ್ರೇಷ್ಠ ಧರ್ಮ’ ಎಂದು ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.

ಪಟ್ಟಣದ ಹಳೆ ಸಾಲೋಟಗಿ ರಸ್ತೆಯಲ್ಲಿ ಶಿರಶ್ಯಾಡ ಸಂಸ್ಥಾನ ಹಿರೇಮಠದ ಇಂಡಿ ಶಾಖಾಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಡ ಮಕ್ಕಳ ಶಿಕ್ಷಣ ಮತ್ತು ಉಚಿತ ಅನ್ನಪ್ರಸಾದ ಹಾಗೂ ವಸತಿ ನಿಲಯದ ಮಹಾದ್ವಾರದ ಪ್ರಥಮ ಹೊಸ್ತಿಲ ಪೂಜಾ ಕಾರ್ಯಕ್ರಮದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಶಿರಶ್ಯಾಡ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಬಡ ಮಕ್ಕಳಿಗಾಗಿ ಉಚಿತ ಪ್ರಸಾದ ನಿಲಯ ಹಾಗೂ ವಸತಿ ನಿಲಯ ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಈಗಾಗಲೇ ಈ ಕಾರ್ಯಕ್ಕೆ ವೈಯಕ್ತಿಕವಾಗಿ ₹5 ಲಕ್ಷ ದೇಣಿಗೆ ನೀಡಿದ್ದು, ಇನ್ನೂ ಅಗತ್ಯವಿದ್ದರೆ ಸಹಾಯ ಮಾಡುತ್ತೇನೆ’ ಎಂದರು.

ADVERTISEMENT

ತಾಳಿಕೋಟೆ ಖಾಸ್ಗತೇಶ್ವರ ಮಠದ ಪೂಜ್ಯ ಸಿದ್ದಲಿಂಗ ದೇವರು ಆಶೀರ್ವಚನ ನೀಡಿ, ‘ಮಾತು ಸೌಮ್ಯ ಹಾಗೂ ಮೃದುವಾಗಿರಬೇಕು. ದುಡಿದ ದುಡ್ಡಲ್ಲಿ ‌ದಾನ, ಧರ್ಮ ಮಾಡಿ. ಎಲ್ಲರೊಂದಿಗೂ ಅನ್ಯೋನ್ಯದಿಂದ ಬಾಳಿದರೆ ಜೀವನ ಸಾರ್ಥಕ’ ಎಂದು ತಿಳಿಸಿದರು.

ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ರೋಡಗಿಯ ಶಿವಲಿಂಗೇಶ್ವರ ಸ್ವಾಮೀಜಿ, ಅರ್ಜುಣಗಿಯ ರೇಣುಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಗುರುಕುಲೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ರಾಕೇಶ ಕಲ್ಲೂರ, ಎಂ.ಆರ್. ಪಾಟೀಲ, ಶ್ರೀಮಂತ ಇಂಡಿ, ಅಶೋಕಗೌಡ ಬಿರಾದಾರ, ಅನಿಲ್ ಏಳಗಿ, ಸಂತೋಷ ಶಾಪೇಟಿ, ಡಿ.ಆರ್.ಶಹಾ, ಜಟ್ಟೆಪ್ಪ ರವಳಿ, ಶಿವಯೋಗಪ್ಪ ಚನ್ನಗೊಂಡ, ಮಲ್ಲನಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಇತರರು ಇದ್ದರು.

ಇಂದು ರಾಜಕಾರಣಿಗಳು ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಹಚ್ಚಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ವೀರಶೈವ ಮಠಾಧೀಶರು ಎಲ್ಲ ಧರ್ಮಗಳನ್ನು ಒಂದೇ ಧರ್ಮದ ದಾರಿಯಲ್ಲಿ ನಡೆಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ
ಶಿವಾನಂದ ಪಾಟೀಲ ಸಚಿವ
ಉಚಿತ ಪ್ರಸಾದ ಹಾಗೂ ವಸತಿ ನಿಲಯಕ್ಕೆ ಇಂಡಿ ನಗರ ಹಾಗೂ ತಾಲ್ಲೂಕಿನ ಜನರು ಸಹಾಯ ಮಾಡುತ್ತಿದ್ದಾರೆ. ಅತಿ ವೇಗವಾಗಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿಯೇ ಮುಗಿಯಲಿದೆ
ಅಭಿನವ ಮುರುಘೇಂದ್ರ ಶಿವಾಚಾರ್ಯರು ಶಿರಶ್ಯಾಡ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.