ADVERTISEMENT

ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 6:15 IST
Last Updated 29 ಜನವರಿ 2026, 6:15 IST
ನಂದೀಶ
ನಂದೀಶ   

ವಿಜಯಪುರ: ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ ಜ.29ರಿಂದ ಫೆ.1ರ ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿನ ವೈಟ್ ಪೆಟೆಲ್ಸ್‌ನಲ್ಲಿ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆಯ ಸದಸ್ಯ ನಂದೀಶ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯಮಶೀಲತೆ ಉತ್ತೇಜಿಸುವ ಮೂಲಕ ವೀರಶೈವ ಲಿಂಗಾಯತ ಸಮುದಾಯದಿಂದ ದೇಶದ ಅಭಿವೃದ್ಧಿಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಲು ನೆರವಾಗುವುದು ಇದರ ಉದ್ದೇಶವಾಗಿದೆ. 2023ರ ಬೆಂಗಳೂರು ಸಮ್ಮೇಳನದಲ್ಲಿ ₹35 ಕೋಟಿ, 2024ರಲ್ಲಿ ಹುಬ್ಬಳ್ಳಿ ಕಾನಕ್ಲೇವ್‌ನಲ್ಲಿ ₹64 ಕೋಟಿ, 2025ರ ಮೈಸೂರು ಕಾನಕ್ಲೇವ್‌ನಲ್ಲಿ ₹130 ಕೋಟಿ ಮೌಲ್ಯದ ವ್ಯವಹಾರಿಕ ಒಡಂಬಡಿಕೆಗಳು ನಡೆದಿವೆ’ ಎಂದರು.

‘ನಾಲ್ಕು ದಿನಗಳ ಈ ಸಮ್ಮೇಳನದಲ್ಲಿ 70,000ಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆಯಿದ್ದು, ಸಮ್ಮೇಳನದಲ್ಲಿ 260ಕ್ಕೂ ಅಧಿಕ ಉದ್ಯಮ ಮಳಿಗೆಗಳು, ವಿಶೇಷ ಗ್ಲೋಬಲ್ ನೆಟ್‌ವರ್ಕಿಂಗ್ ಜೋನ್, ಸಾಮಾಜಿಕ-ಆರ್ಥಿಕ ಅಭಿವೃದ್ಧಿ ವೇದಿಕೆ ಹಾಗೂ ಸ್ಟಾರ್ಟ್ಅಪ್, ಎಂಎಸ್‌ಎಂಇ, ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳನ್ನು ಒಳಗೊಂಡ ಸಮ್ಮೇಳನ ನಡೆಯಲಿದೆ’ ಎಂದರು.

ADVERTISEMENT

‘ಜ.29ರಂದು ಸಂಜೆ 4.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಎಂ.ಬಿ. ಪಾಟೀಲ, ಈಶ್ವರ ಖಂಡ್ರೆ, ಶರಣಬಸಪ್ಪ ದರ್ಶನಾಪುರ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇರುವರು. ಫೆ. 1ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಚಿಕ್ಕಮಗಳೂರು ಬಸವತತ್ವ ಪೀಠದ ಶಿವಬಸವ ಮರುಳಸಿದ್ಧ ಸ್ವಾಮೀಜಿ, ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ ಭಾಗಿಯಾಗುವರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.