ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣಾ ಅಖಾಡ ಸಿದ್ಧಗೊಳ್ಳತೊಡಗಿದೆ. ಈ ಬಾರಿ ಪಾಲಿಕೆಯಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಲಾಗಿರುವುದು ಮಹಿಳೆಯರಿಗೆ ರಾಜಕೀಯ ಶಕ್ತಿ ಲಭಿಸಿದೆ.
ಮಹಾನಗರ ಪಾಲಿಕೆಯ ಒಟ್ಟು 35 ವಾರ್ಡ್‌ಗಳ ಪೈಕಿ 16 ವಾರ್ಡ್‌ಗಳಲ್ಲಿ ಮಹಿಳೆಯರು ಸ್ಪರ್ಧಿಸಲು ಅವಕಾಶ ಲಭಿಸಿದೆ. ಇದರಲ್ಲಿ ಸಾಮಾನ್ಯ ವರ್ಗದ ಮಹಿಳೆಯರಿಗೆ ಅತಿ ಹೆಚ್ಚು ಅಂದರೆ 9 ವಾರ್ಡ್‌ಗಳನ್ನು ಮೀಸಲಿಡಲಾಗಿದೆ. ಉಳಿದಂತೆ ಹಿಂದುಳಿದ ವರ್ಗ ‘ಎ’ ಮಹಿಳೆ 4, ಹಿಂದುಳಿದ ವರ್ಗ ‘ಬಿ’ ಮಹಿಳೆ 1 ಹಾಗೂ ಪರಿಶಿಷ್ಟ ಜಾತಿ ಮಹಿಳೆ 2 ಸ್ಥಾನ ಮೀಸಲು ನೀಡಲಾಗಿದೆ.
ಮೀಸಲು ವಾರ್ಡ್‌ಗಳ ಹೊರತಾಗಿಯೂ ಇನ್ನುಳಿದ ಯಾವುದಾರು ವಾರ್ಡ್‌ಗಳಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಮಹಿಳೆಯರು ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯೂ ಇದೆ!
ಸುವರ್ಣಾವಕಾಶ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುವರ್ಣಾವಕಾಶ ಲಭಿಸಿದೆ. ಭವಿಷ್ಯದಲ್ಲಿ ಮೇಯರ್, ಉಪಮೇಯರ್ ಗೌನ್ ಧರಿಸುವ ಯೋಗವೂ ಕೂಡಿಬರುವ ಸಾಧ್ಯತೆ ಇದೆ.
ಸ್ಪರ್ಧಾಕಾಂಕ್ಷಿ ಮಹಿಳಾ ಮುಖಂಡರು ಚುನಾವಣೆಗೆ ತಯಾರಿ ನಡೆಸಿದ್ದು, ಪಕ್ಷದ ಪ್ರಭಾವಿ ಮುಖಂಡರು, ಜಿಲ್ಲಾ ಘಟಕದ ಅಧ್ಯಕ್ಷರು, ಶಾಸಕರನ್ನು, ರಾಜ್ಯ ನಾಯಕರನ್ನು ಭೇಟಿಯಾಗತೊಡಗಿದ್ದಾರೆ. ತಮಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಮಂಡಿಸತೊಡಗಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಲು ಕೆಲವು ವಾರ್ಡ್‌ಗಳಲ್ಲಿ ಮೂರ್ನಾಲ್ಕು ಮಹಿಳಾ ಮುಖಂಡರು ತೆರೆಮರೆಯಲ್ಲಿ ಪೈಪೋಟಿ ಆರಂಭಿಸಿದ್ದಾರೆ.
ಮೀಸಲಾತಿ ಬದಲಾವಣೆಯಿಂದ ಅವಕಾಶ ವಂಚಿತವಾಗಿರುವ ಹಲವು ಮಾಜಿ ಕಾರ್ಪೊರೇಟರ್‌ಗಳು ತಮ್ಮ ಪತ್ನಿ, ತಾಯಿ, ತಂಗಿ, ಅಕ್ಕ ಸೇರಿದಂತೆ ತಮ್ಮ ಕುಟುಂಬದವರಿಗೆ ಟಿಕೆಟ್ ಕೊಡಿಸಲು ಯೋಜನೆ ರೂಪಿಸಿದ್ದಾರೆ.
ವಾರ್ಡ್ ವ್ಯಾಪ್ತಿಯ ಮನೆ, ಮನೆಗಳಿಗೆ ತೆರಳುವುದು, ಹಬ್ಬ, ಜಾತ್ರೆ, ಉತ್ಸವಗಳಲ್ಲಿ ಮಹಿಳೆಯರನ್ನು ಮನೆಗೆ ಆಹ್ವಾನಿಸುವುದು, ಉಡಿ ತುಂಬುವುದು, ವಾರ್ಡ್‌ನಲ್ಲಿ ಸಾರ್ವಜನಿಕ ಕೆಲಸ, ಕಾರ್ಯ ಮಾಡತೊಡಗಿದ್ದಾರೆ. ಪಕ್ಷದ ಸಭೆ, ಸಮಾರಂಭಗಳಿಗೆ ಮಹಿಳೆಯರನ್ನು ಒಟ್ಟುಗೂಡಿಸಿ ಕರೆದುಕೊಂಡು ಹೋಗುವುದು, ಪಕ್ಷದ ನಾಯಕರ ಎದುರು ಪರೇಡ್ ಮಾಡುವ ಕಾರ್ಯದಲ್ಲಿ ಈಗಾಗಲೇ ಅನೇಕರು ತೊಡಗಿದ್ದಾರೆ.
ಇದುವರೆಗೆ ಪಕ್ಷ ಸಂಘಟನೆ, ಸಭೆ–ಸಮಾರಂಭದಲ್ಲಿ ಜಯಕಾರ ಹಾಕಿಲು ಸೀಮಿತವಾಗಿದ್ದ ನಗರದ ವಿವಿಧ ರಾಜಕೀಯ ಪಕ್ಷಗಳ ಮಹಿಳಾ ಮುಖಂಡರಿಗೆ ಮಹಾನಗರ ಪಾಲಿಕೆಯಲ್ಲಿ ಸ್ಪರ್ಧಿಸಲು ಅವಕಾಶ ಲಭಿಸಿದೆ. ಇದರಿಂದ ಪಾಲಿಕೆಯಲ್ಲಿ ಉತ್ತಮ ಆಡಳಿತ ನಿರೀಕ್ಷಿಸಬಹುದು ಎಂಬ ಆಶಯ ಚಿಗುರೊಡದಿದೆ. ಜೊತೆಗೆ ಹೆಸರಿಗಷ್ಟೇ ಮಹಿಳಾ ಕಾರ್ಪೊರೇಟರ್, ಅಧಿಕಾರ ನಡೆಸುವವರು ಮಾತ್ರ ಅವರ ಪತಿ ಅಥವಾ ಕುಟುಂಬದವರು ಎಂಬಂತಾಗುವ ಪರಿಸ್ಥಿತಿಯೂ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಅಳುಕು ಇದೆ.
ಒಟ್ಟಾರೆ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಮೀಸಲು ಶೇ 50ರಷ್ಟು ಲಭಿಸಿರುವುದು ರಾಜಕೀಯದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ಸಿಕ್ಕಿದೆ. ಅವಕಾಶ ವಂಚಿತ ಪುರುಷ ರಾಜಕಾರಣಿಗಳಲ್ಲಿ ಅಸೂಹೆಗೂ ಕಾರಣವಾಗಿದೆ!
***
ಮಹಿಳೆಯರಿಗೆ ಮೀಸಲಾದ ವಾರ್ಡ್‌ಗಳು
ವಾರ್ಡ್ ಸಂಖ್ಯೆ; ಮೀಸಲಾತಿ
01;ಹಿಂದುಳಿದ ವರ್ಗ ’ಎ’ ಮಹಿಳೆ
03;ಪರಿಶಿಷ್ಟ ಜಾತಿ ಮಹಿಳೆ
05; ಹಿಂದುಳಿದ ವರ್ಗ ‘ಬಿ’ ಮಹಿಳೆ
08;ಸಾಮಾನ್ಯ ಮಹಿಳೆ
14;ಪರಿಶಿಷ್ಟ ಜಾತಿ ಮಹಿಳೆ
15;ಸಾಮಾನ್ಯ ಮಹಿಳೆ
16;ಹಿಂದುಳಿದ ವರ್ಗ ‘ಎ’ ಮಹಿಳೆ
21;ಸಾಮಾನ್ಯ ಮಹಿಳೆ
22;ಹಿಂದುಳಿದದ ವರ್ಗ ‘ಎ’ ಮಹಿಳೆ
26;ಸಾಮಾನ್ಯ ಮಹಿಳೆ
27;ಹಿಂದುಳಿದ ವರ್ಗ ‘ಎ’ ಮಹಿಳೆ
31;ಸಾಮಾನ್ಯ ಮಹಿಳೆ
32;ಸಾಮಾನ್ಯ ಮಹಿಳೆ
33;ಸಾಮಾನ್ಯ ಮಹಿಳೆ
34;ಸಾಮಾನ್ಯ ಮಹಿಳೆ
35;ಸಾಮಾನ್ಯ ಮಹಿಳೆ
***
ಇದುವರೆಗೆ ಪಕ್ಷಕ್ಕಾಗಿ ದುಡಿದವರಿಗೆ ಪ್ರಥಮ ಆದ್ಯತೆ ನೀಲಾಗುವುದು. ಪಾಲಿಕೆ ಚುನಾವಣೆ ಸಂಬಂಧ ಶೀಘ್ರದಲ್ಲೇ ಪಕ್ಷದ ಶಾಸಕರು, ಮುಖಂಡರೊಂದಿಗೆ ಚರ್ಚಿಸಿ ಚುನಾವಣೆಗೆ ಸಿದ್ಧತೆ ಆರಂಭಿಸಲಾಗುವುದು
–ವಿದ್ಯಾರಾಣಿ ತುಂಗಳ, ಅಧ್ಯಕ್ಷೆ, ಕಾಂಗ್ರೆಸ್ ಮಹಿಳಾ ಘಟಕ, ವಿಜಯಪುರ
***
ಎಲ್ಲ 16 ಮೀಸಲು ವಾರ್ಡ್‌ಗಳಲ್ಲಿ ಸಮರ್ಥ ಮಹಿಳೆಯರನ್ನು ಕಣಕ್ಕಿಳಿಸಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಸಿದ್ದತೆ ನಡೆದಿದೆ. ಪ್ರತಿ ವಾರ್ಡ್‌ಗೆ ಇಬ್ಬರಿಂದ ನಾಲ್ಕು ಜನ ಸ್ಪರ್ಧೆಗೆ ಅಣಿಯಾಗಿದ್ದಾರೆ
–ಶಿಲ್ಪಾ ಕುದರಗೊಂಡ,ಅಧ್ಯಕ್ಷೆ, ಬಿಜೆಪಿ ಮಹಿಳಾ ಘಟಕ, ವಿಜಯಪುರ
***
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಾಲಿಕೆಯ ಪ್ರತಿ ಮಹಿಳಾ ಮೀಸಲು ಕ್ಷೇತ್ರದಲ್ಲೂ ಅರ್ಹರನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಲು ಈಗಾಗಲೇ ಸೂಚಿಸಿದ್ದಾರೆ. ಪ್ರಮುಖ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಗುವುದು
–ಸ್ನೇಹಾ ಶೆಟ್ಟಿ, ಅಧ್ಯಕ್ಷೆ, ಜೆಡಿಎಸ್ ಮಹಿಳಾ ಘಟಕ, ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.