ADVERTISEMENT

ಪತ್ನಿ ಕೊಲೆಗೆ ಯತ್ನಿಸಿದ್ದ ಪತಿಗೆ ಆರು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 15:00 IST
Last Updated 19 ಜನವರಿ 2021, 15:00 IST

ವಿಜಯಪುರ: ಪತ್ನಿ ಕೊಲೆಗೆ ಯತ್ನಿಸಿದ್ದ ಪತಿಗೆ ಜಿಲ್ಲಾ ಸೆಷನ್ಸ್‌ ನ್ಯಾಯಾಲಯವು ಆರು ವರ್ಷ ಜೈಲು ಶಿಕ್ಷೆ ಹಾಗೂ ₹ 15 ಸಾವಿರ ದಂಡ ವಿಧಿಸಿದೆ.

ಪ್ರಕರಣದ ವಿವರ:

ಸಿಂದಗಿ ತಾಲ್ಲೂಕಿನ ಗಣಿಯಾರ ಗ್ರಾಮದ ಶರಣಗೌಡ ಕಾಶ್ಯಾಪೂರ ತನ್ನ ಪತ್ನಿನೀಲಮ್ಮಳ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದನು. ಇದರಿಂದ ಬೇಸತ್ತ ನೀಲಮ್ಮ ತನ್ನ ಮಗನೊಂದಿಗೆ ತಮ್ಮ ಹೊಲದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದರು.

ADVERTISEMENT

2018ರ ಜೂನ್‌ 4ರಂದು ಆರೋಪಿ ಪತಿಯು ಗುಡಿಸಿಲಿಗೆ ಬೆಂಕಿ ಹಚ್ಚಿ ಪತ್ನಿ ಕೊಲೆಗೆ ಯತ್ನಿಸಿದ್ದನು. ಈ ಸಂದರ್ಭದಲ್ಲಿ ಪ್ರಶ್ನಿಸಲು ಹೋದ ಮಗನಿಗೆ ಮಚ್ಚಿನಿಂದ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದನು. ಗುಡಿಸಿಲಿಗೆ ಬೆಂಕಿ ಹಚ್ಚಿದ್ದರಿಂದ ₹ 2ಸಾವಿರ ನಗದು, ₹ 10 ಸಾವಿರ ಮೌಲ್ಯದ ಆಹಾರ ಸಾಮಗ್ರಿಗಳು, ಪಾತ್ರೆಗಳು ಸುಟ್ಟು ಹೋಗಿದ್ದವು. ಈ ಸಂಬಂಧ ಸಿಂದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸದಾನಂದ ಎನ್‌.ನಾಯ್ಕ್‌ ಅವರು ಸಾಕ್ಷಿ, ಪುರಾವೆಗಳನ್ನು ಅವಲೋಕಿಸಿ, ಆಪಾದನೆ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಕೆ.ಕೆ.ಕುಲಕರ್ಣಿ ವಾದ ಮಂಡಿಸಿದ್ದರು ಎಂದು ಪ್ರಧಾನ ಸರ್ಕಾರಿ ಅಭಿಯೋಜಕರಾದ ವನಿತಾ ಎಸ್‌.ಇಟಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.