ADVERTISEMENT

ವಿಜಯಪುರ–ಹುಬ್ಬಳ್ಳಿ ಹೆದ್ದಾರಿ ಮೇಲ್ದರ್ಜೆಗೆ: ಗಡ್ಕರಿ ಭರವಸೆ

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಪತ್ರಕ್ಕೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 14:40 IST
Last Updated 27 ಫೆಬ್ರುವರಿ 2025, 14:40 IST
ಸುನೀಲಗೌಡ ಪಾಟೀಲ
ಸುನೀಲಗೌಡ ಪಾಟೀಲ   

ವಿಜಯಪುರ: ವಿಜಯಪುರ- ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಯನ್ನು ಷಟ್ಪಥವಾಗಿ (6 ಲೇನ್) ಅಭಿವೃದ್ಧಿ ಪಡಿಸುವಂತೆ ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

‘ವಿಜಯಪುರ ಜಿಲ್ಲೆಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗ ಇರುವ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಬೇಕು’ ಎಂದು ಕೇಂದ್ರ ಸಚಿವರಿಗೆ ಜ.15ರಂದು ಸುನೀಲಗೌಡ ಪಾಟೀಲ ಪತ್ರ ಬರೆದಿದ್ದರು. 

‘ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಿಂದ ಹುಬ್ಬಳ್ಳಿ ಮತ್ತು ಬೆಳಗಾವಿ ಸಂಪರ್ಕಿಸುವ ಹೆದ್ದಾರಿಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಹೆಚ್ಚು ಸಮಯ ಬೇಕಾಗಿತ್ತಿದೆ. ಇದರಿಂದ ಆರ್ಥಿಕತೆಗೂ ಹಿನ್ನೆಡೆಯಾಗಿದೆ’ ಎಂದು ಪತ್ರದಲ್ಲಿ ತಿಳಿಸಿದ್ದರು.

ADVERTISEMENT

‘ಈ ಹೆದ್ದಾರಿಗಳನ್ನು ಆರು ಪಥದಕ್ಕೆ ಮೇಲ್ದರ್ಜೆಗೆ ಏರಿಸುವುದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದ್ದು, ಸುರಕ್ಷತೆಯ ಜೊತೆಗೆ ಸಂಚಾರ ಸಮಯವೂ ತಗ್ಗಲಿದೆ. ಜೊತೆಗೆ ವಾಣಿಜ್ಯ ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಗಳ ಜೊತೆ ವಾಣಿಜ್ಯ ವ್ಯವಹಾರವೂ ವೃದ್ಧಿಸಿ ಪ್ರವಾಸೋದ್ಯಮದ ಅವಕಾಶವನ್ನೂ ಹೆಚ್ಚಿಸಲಿದೆ. ಉದ್ಯೋಗ ಸೃಷ್ಟಿ, ಯುವಕರಲ್ಲಿ ಕೌಶಲಾಭಿವೃದ್ಧಿ ಹೆಚ್ಚಳ, ಹೊಸ ಕೈಗಾರಿಕೆಗಳ ಸ್ಥಾಪನೆ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೂ ಇದರಿಂದ ಲಾಭವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಬೇಡಿಕೆಗೆ ಸ್ಪಂದಿಸಿರುವ ಸಚಿವರು, ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.