ADVERTISEMENT

ವಿಜಯಪುರ: ಸಮರ್ಪಕ ವಿದ್ಯುತ್‌ ಪೂರೈಕೆ; ಇಲ್ಲ ಸಮಸ್ಯೆ

ಬಸವರಾಜ ಸಂಪಳ್ಳಿ
Published 22 ಫೆಬ್ರುವರಿ 2021, 12:31 IST
Last Updated 22 ಫೆಬ್ರುವರಿ 2021, 12:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಿಜಯಪುರ: ಹುಬ್ಬಳ್ಳಿ ವಿದ್ಯುಚ್ಛಕ್ತಿ ಸರಬರಾಜು ಮಂಡಳಿ(ಹೆಸ್ಕಾಂ) ವ್ಯಾಪ್ತಿಗೆ ಒಳಪಟ್ಟಿರುವ ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಗಂಭೀರ ಮತ್ತು ಗುರುತರವಾದ ಸಮಸ್ಯೆ, ದೂರುಗಳಾಗಲಿ ಇಲ್ಲ.

ಜಿಲ್ಲೆಯ 792 ಗ್ರಾಮಗಳು, 399 ತಾಂಡಾ ಮತ್ತು ಹರಿಜನ ಕೇರಿಗಳು ಸೇರಿದಂತೆ ಎಲ್ಲ ಗ್ರಾಮ ಮತ್ತು ಜನವಸತಿ ಪ್ರದೇಶಗಳಿಗೂ ವಿದ್ಯುತ್‌ ಸೌಲಭ್ಯವಿದೆ. ವಿದ್ಯುತ್‌ ರಹಿತ ಯಾವುದೇ ಗ್ರಾಮಗಳಿಲ್ಲ.

ಜಿಲ್ಲೆಯಲ್ಲಿ ಸದ್ಯ 7,51,047 ವಿದ್ಯುತ್‌ ಬಳಕೆದಾರರಿದ್ದಾರೆ. ಇದರಲ್ಲಿ 1.07 ಲಕ್ಷ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳಿದ್ದಾರೆ. ನಿರಂತರ ಜ್ಯೋತಿ ವಿದ್ಯುತ್‌ ಲೈನ್‌ ಮೂಲಕ 24 ತಾಸು ವಿದ್ಯುತ್‌ ಒದಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಲೋಡ್‌ ಶೆಡ್ಡಿಂಗ್‌ ಇಲ್ಲ ಎಂದುಹೆಸ್ಕಾಂ ವಿಜಯಪುರ ವೃತ್ತದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಜಿ.ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ2.05 ಲಕ್ಷ ಐಪಿ ಸೆಟ್‌ಗಳಿಗೆ(ಕೃಷಿ‌‌ ಪಂಪ್‌ಸೆಟ್‌) ಪ್ರತಿ ದಿನ ಏಳು ತಾಸು ತ್ರೀಪೇಸ್‌ ವಿದ್ಯುತ್‌ ಉಚಿತವಾಗಿ ಪೂರೈಕೆಯಾಗುತ್ತಿದೆ. ಹೀಗಾಗಿ ಕೃಷಿ ಚಟುವಟಿಕೆಗಳು ಜಿಲ್ಲೆಯಲ್ಲಿ ಸರಾಗವಾಗಿ ನಡೆದಿವೆ.

ಜಿಲ್ಲೆಯಲ್ಲಿ 374 ಬೃಹತ್‌ ಕೈಗಾರಿಕೆಗಳು, 19,185 ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಕಾರ್ಯಾಚರಿಸುತ್ತಿದ್ದು, ಇವುಗಳಿಗೂ ದಿನಪೂರ್ತಿ ಸಮರ್ಪಕವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ.

ಜಿಲ್ಲೆಗೆ ಪ್ರತಿದಿನ 550 ಮೆಗಾ ವಾಟ್‌ ವಿದ್ಯುತ್‌ ಬೇಡಿಕೆಯಿದೆ. ಅಂದರೆ, 5 ಮಿಲಿಯನ್‌ ಯುನಿಟ್‌ ಬೇಡಿಕೆ ಇದೆ. ತಿಂಗಳಿಗೆ 150ರಿಂದ 160 ಮಿಲಿಯನ್‌ ಯುನಿಟ್ ವಿದ್ಯುತ್‌ ಬಳಕೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳು ₹23 ಕೋಟಿ ಆದಾಯ ಸಂಗ್ರಹವಾಗುತ್ತಿದೆ. ಎನ್‌ಟಿಪಿಸಿ, ಆರ್‌ಟಿಪಿಸಿ, ವಿಂಡ್‌ಮಿಲ್‌, ಸೋಲಾರ್‌ ಪವರ್ ಜಿಲ್ಲೆಗೆ ಪೂರೈಕೆಯಾಗುತ್ತಿದೆ. ಹೀಗಾಗಿ ವಿದ್ಯುತ್‌ ಕೊರತೆಯಿಲ್ಲ ಎನ್ನುತ್ತಾರೆ ಅವರು.

46,667 ವಿದ್ಯುತ್‌ ಪರಿವರ್ತಕ(ಟಿಸಿ)ಗಳಿದ್ದು, ಇವುಗಳ ದುರಸ್ತಿಗಾಗಿ ಜಿಲ್ಲೆಯ ಎಂಟು ಕಡೆಗಳಲ್ಲಿ ದುರಸ್ತಿ ಕೇಂದ್ರಗಳಿವೆ. ಹೀಗಾಗಿ ರೈತರ ಕೃಷಿ ಪಂಪ್‌ಸೆಟ್‌ ಕೆಟ್ಟುಹೋದರೆ ನಿಗದಿತ 72 ತಾಸಿನೊಳಗೆ ದುರಸ್ತಿ ಮಾಡಿಸಲಾಗುತ್ತಿದೆ. ಕುಡಿಯುವ ನೀರು ಪೂರೈಕೆ ಮತ್ತು ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಪೂರೈಸುವ ಟಿಸಿಗಳು ಕೆಟ್ಟುಹೋದರೆ ಕೇವಲ 24 ತಾಸಿನೊಳಗೆ ದುರಸ್ತಿ ಮಾಡಿಕೊಡುವ ಮೂಲಕ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ ಎಂದರು.

ವಿದ್ಯುತ್‌ ಪೂರೈಕೆಯನ್ನು ಸುಲಲಿತಗೊಳಿಸುವ ಉದ್ದೇಶದಿಂದ 60 ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿವೆ. ಬಸವನ ಬಾಗೇವಾಡಿ, ವಿಜಯಪುರ ಮತ್ತು ಇಂಡಿ ಸೇರಿದಂತೆ ಮೂರು 220 ಕೆವಿ ಸಾಮರ್ಥ್ಯದ, 120 ಕೆವಿ ಸಾಮರ್ಥ್ಯದ 35, 33 ಕೆವಿ ಸಾಮರ್ಥ್ಯದ 22 ಸ್ಟೆಷನ್‌ಗಳು ಇವೆ.ಜಿಲ್ಲೆಯಲ್ಲಿ 11ಕೆವಿ ಸಾಮರ್ಥ್ಯದ 583 ವಿದ್ಯುತ್‌ ಮಾರ್ಗಗಳಲ್ಲಿ ನಿರಂತರ ವಿದ್ಯುತ್‌ ಪೂರೈಕೆಯಾಗುತ್ತಿದೆ.

ಹೊಸದಾಗಿ ಸಿಂದಗಿ ಸಮೀಪದ ಅಹೇರಿಯಲ್ಲಿ 220 ಕೆ.ವಿ.ಸಾಮರ್ಥ್ಯದ ಸ್ಟೇಷನ್‌ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲದೇ, ಧೂಳಖೇಡ, ಜುಮನಾಳ, ಕಂಬಾಗಿ, ಹಿರೇಮುರಾಳ, ಹೊನವಾಡದಲ್ಲಿ 110 ಕೆವಿ ಸ್ಟೇಷನ್‌ಗಳ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ ಎಂದು ಅವರು ಹೇಳಿದರು.

ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಗ್ರಾಮೀಣ ವಿದ್ಯುತ್‌ ಯೋಜನೆಯಡಿ ₹ 40 ಕೋಟಿ ಮೊತ್ತದಲ್ಲಿ ಹಳೆಯ ವಿದ್ಯುತ್‌ ಲೈನ್‌, ಹಳೇ ಟಿಸಿ, ಹಳೇ ಮೀಟರ್‌ಗಳನ್ನು ಬದಲಾಯಿಸಿ, ಹೊಸವನ್ನು‌ ಅಳವಡಿಕೆ ಮಾಡಲಾಗಿದೆ. ಹೀಗಾಗಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಹೇಳಿಕೊಳ್ಳುವಂತಹ ಸಮಸ್ಯೆಗಳು ಇಲ್ಲ ಎನ್ನುತ್ತಾರೆ ಅವರು.

‘ಗಾಳಿ, ಮಳೆ ಮತ್ತಿತರ ಕಾರಣದಿಂದ ವಿದ್ಯುತ್‌ ಕಂಬ ಮುರಿದು ಬೀಳುವುದು, ವಿದ್ಯುತ್‌ ಲೈನ್‌ ಹರಿದು ಬೀಳುವುದು ಸಹಜ. ಇಂತಹ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುತ್ತಿದೆ’ ಎಂದರು.

ಶಿಸ್ತು ಕ್ರಮ:ರೈತರ ಐಪಿ ಸೆಟ್‌ ಗಳಿಗೆ ಸಂಪರ್ಕ ಕಲ್ಪಿಸುವ ಟಿಸಿಗಳು ಸುಟ್ಟು ಹೋದರೆ ದುರಸ್ತಿ ಮಾಡಲು ಹೆಸ್ಕಾಂ ಸಿಬ್ಬಂದಿ ಅಥವಾ ಏಜನ್ಸಿಯವರು ಹಣ ಕೇಳಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

₹30 ಕೋಟಿ ಬಾಕಿ:ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳ ನೀರು ಪೂರೈಕೆ, ಬೀದಿ ದೀಪ ಶುಲ್ಕ ಮತ್ತು ಕೈಗಾರಿಕೆಗಳಿಂದ ಹಾಗೂ ಗ್ರಾಹಕರಿಂದ ₹30 ಕೋಟಿ ವಿದ್ಯುತ್‌ ಶುಲ್ಕ ಬರುವುದು ಬಾಕಿ ಇದೆ. ವಸೂಲಿಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಭೂಗತ ಕೇಬಲ್‌: ವಿಜಯಪುರ ನಗರದಲ್ಲಿ ₹220 ಕೋಟಿ ಮೊತ್ತದಲ್ಲಿ ಭೂಗತ ಕೇಬಲ್‌ ಅಳವಡಿಕೆ ಸಂಬಂಧ ಕೈಗೊಂಡಿರುವ ಯೋಜನೆಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಭೂಗತ ಕೇಬಲ್‌ ಅಳವಡಿಕೆಯಿಂದ ನಗರದಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.

****

ಗ್ರಾಹಕರು ವಿದ್ಯುತ್‌ ಅನ್ನು ಅನಗತ್ಯವಾಗಿ ಪೋಲು ಮಾಡದೇ, ಮಿತವಾಗಿ ಬಳಕೆ ಮಾಡಬೇಕು. ವಿದ್ಯುತ್‌ ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
ಜಿ.ಶರಣಪ್ಪ, ಸೂಪರಿಂಟೆಂಡೆಂಟ್‌ ಎಂಜಿನಿಯರ್‌,ವಿಜಯಪುರ ವೃತ್ತ, ಹೆಸ್ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.