
ವಿಜಯಪುರ: ‘ಈ ಹಿಂದಿನ ಬಿಜೆಪಿ ಸರ್ಕಾರವು ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯದೆ ಹುಂಬತನದಿಂದ ಕಾಮಗಾರಿ ಆರಂಭಿಸಿದ್ದರಿಂದಲೇ ವಿಜಯಪುರದಲ್ಲಿ ವಿಮಾನಗಳ ಹಾರಾಟ ವಿಳಂಬವಾಗಿದೆ’ ಎಂದು ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಚೆಕ್ ಲಿಸ್ಟ್ ಆಧರಿಸಿ ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಿತ್ತು. ಈ ಪತ್ರ ದೊರೆತಿದ್ದರೆ ವಿಮಾನಗಳು ಎಂದೋ ವಿಜಯಪುರದಲ್ಲಿ ಹಾರಾಟವಾಗುತ್ತಿದ್ದವು. ಬಿಜೆಪಿ ಸರ್ಕಾರ ವೈಜ್ಞಾನಿಕವಾಗಿ ಎಲ್ಲ ಪ್ರಕ್ರಿಯೆ ನಡೆಸಿದ್ದರೆ, ಇಷ್ಟೊಂದು ವಿಳಂಬ ಆಗುತ್ತಿರಲಿಲ್ಲ. ಈಗ ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ’ ಎಂದರು.
‘ವಿಜಯಪುರದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ₹100 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗಬೇಕಿದೆ’ ಎಂದು ವಿವರಿಸಿದರು.
‘ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪರವಾನಗಿಗಾಗಿ ಏರೋಡ್ರೋಂ ಅಥಾರಿಟಿಗೆ ಪತ್ರ ಬರೆಯಲಾಗಿದ್ದು, 10ರಿಂದ 12 ದಿನಗಳಲ್ಲಿ ಪರವಾನಗಿ ಸಿಗುವ ವಿಶ್ವಾಸವಿದೆ. ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ದೊರೆಯದ ಕಾರಣಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಶೀಘ್ರದಲ್ಲೇ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ವಿಮಾನ ಹಾರಾಟ ಆರಂಭವಾಗಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾತ್ರಿ ವೇಳೆ ವಿಮಾನ ಲ್ಯಾಂಡಿಂಗ್‌ಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಲಕ್ಷ್ಯ ಹರಿಸಲಾಗಿದೆ. ಇದಕ್ಕೆ ಪೂರಕವಾದ ಪ್ರಕ್ರಿಯೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು–ಎಸ್.ಜಿ. ನಂಜಯ್ಯನಮಠ, ಅಧ್ಯಕ್ಷ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.