ವಿಜಯಪುರ: ಇತಿಹಾಸದ ಆಳ-ಅಗಲವನ್ನು ಅರಿಯಲು ಚಿತ್ರಕಲೆ ಅತ್ಯಂತ ಸಹಕಾರಿಯಾಗಿದ್ದು, ಪ್ರಾಚೀನ ಕಾಲದಿಂದಲೂ ತನ್ನದೇ ಆದ ಮಹತ್ವವನ್ನು ಉಳಿಸಿಕೊಂಡು ಬಂದಿದೆ ಎಂದು ಕನಕದಾಸ ಬಡಾವಣೆಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬಿ.ಕೆ.ಶ್ರೀದೇವಿ ಹೇಳಿದರು.
ನಗರದ ಪ್ರವಾಸೋದ್ಯಮ ಇಲಾಖೆ ಆರ್ಟ್ ಗ್ಯಾಲರಿಯಲ್ಲಿ ಕರ್ನಾಟಕ ಲಲಿತ ಕಲೆ ಆಕಾಡೆಮಿ ಬೆಂಗಳೂರು ಹಾಗೂ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ‘ನಿಮ್ಮೊಂದಿಗೆ ನಾವು’ ಎಂಬ ಒಂದು ದಿನದ ಚಿತ್ರಕಲೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಚಿತ್ರಕಲೆ ಪ್ರಾಚೀನ ಕಾಲದ ಕಲೆಯಾಗಿದ್ದು ತನ್ನದೇ ಆದ ಇತಿಹಾಸ ಹೊಂದಿದೆ. ಬಹುತೇಕ ಇತಿಹಾಸಕಾರರು ಚಿತ್ರಕಲೆ ಆಧರಿಸಿ ಭಾಷೆ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ನಾವು ಚಿತ್ರಕಲೆಗೆ ಹೆಚ್ಚಿನ ಮಹತ್ವ ನೀಡಿ ಆ ಕಲೆಯನ್ನು ಉಳಿಸಿ-ಬೆಳೆಸಲು ಪ್ರೋತ್ಸಾಹಿಸಬೇಕು’ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ‘ವಿಶ್ವ ಮಾನವರೆಲ್ಲ ಚಿತ್ರಕಲೆ ಪ್ರೀತಿಸಿದ್ದರು. ರಾಜಮಹಾರಾಜರು ಚಿತ್ರಕಲೆಗಳಿಗೆ ಪ್ರಾಧಾನ್ಯತೆ ನೀಡಿದ್ದರು. ಇತ್ತೀಚಿಗೆ ಶಾಲಾ ಕಾಲೇಜುಗಳಲ್ಲಿ ಚಿತ್ರಕಲೆಯನ್ನು ನಿರ್ಲಕ್ಷಿಸುತ್ತಿರುವದು ಅತ್ಯಂತ ನೋವಿನ ಸಂಗತಿ. ನಾವೆಲ್ಲರು ಮಕ್ಕಳಿಗೆ ಚಿತ್ರಕಲೆ ಉಳಿಸಿಕೊಂಡು ಹೋಗಲು ಅರಿವು ಮೂಡಿಸಬೇಕಿದೆ’ ಎಂದರು.
‘ಸರ್ಕಾರ ಚಿತ್ರಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಚಿತ್ರಕಲೆ ಶಿಕ್ಷಕರನ್ನು ನೇಮಕ ಮಾಡಬೇಕು. ಮಕ್ಕಳಲ್ಲಿ ಚಿತ್ರಕಲೆ ಕುರಿತಾಗಿ ಆಸಕ್ತಿ ತಾಳುವಂತಹ ವಾತಾವರಣ ನಿರ್ಮಾಣ ಮಾಡಬೇಕು’ ಎಂದರು.
ಬೆಂಗಳೂರು ಕನ್ನಡ ಪ್ರಾಧಿಕಾರ ಸದಸ್ಯೆ ದಾಕ್ಷಾಯಿಣಿ ಹುಡೇದ ಮಾತನಾಡಿ, ‘ಚಿತ್ರಕಲೆ ಹಾಗೂ ಭಾಷೆ ಒಂದಕ್ಕೊಂದು ಪೂರಕವಾಗಿವೆ. ಚಿತ್ರಕಲೆ ಅತ್ಯಂತ ಶ್ರೀಮಂತ ಕೌಶಲವಾಗಿದ್ದು, ಎಲ್ಲರೂ ಚಿತ್ರ ಬಿಡಿಸಲು ಅಸಾಧ್ಯ’ ಎಂದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ, ಲಲಿತಾ ಬಳಗಾನೂರ, ಆನಂದ ಝಂಡೆ, ಬಸವರಾಜ ಪಾಟೀಲ, ರಾಜೇಶ್ವರಿ ಮೋಪಗಾರ, ಬಸವರಾಜ ಜಾನೆ, ಮಹಾದೇವಪ್ಪ ಮೋಪಗಾರ, ಮಂಜುಳಾ, ವಿದ್ಯಾದರ ಸಾಲಿ, ಶಬ್ಬೀರ ನದಾಫ, ಬಿ.ನೀಲಮ್ಮ, ವಿ.ವಿ.ಹಿರೇಮಠ, ವಿಠ್ಠಲ ಬೋವಿ, ರವಿ ನಾಯಕ, ಆರತಿ ಹರಿಜನ, ಅಪ್ಪಾಜಿ ಆಕಳೆ, ಗಿರಿಜಾ ಬಿರಾದಾರ, ಮಲ್ಲಪ್ಪ ನಾಟಿಕಾರ, ಅಹಮ್ಮದ ಹುದ್ದಾರ, ಶ್ರೀಶೈಲ ಹೂಗಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.