
ವಿಜಯಪುರ: ಆಸಾರ್ ಮಹಲ್ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಕಾರ್ಯ ಈವರೆಗೂ ಆಗಿಲ್ಲ. ಈ ಭಾಗದ ಶಾಸಕರು ನೊಂದ ಕುಟುಂಬಕ್ಕೆ ಪರಿಹಾರ ಕೊಡಿಸಿದಾಗ ಮಾತ್ರ ನಾವೆಲ್ಲ ಅವರನ್ನು ನೈಜ ಹಿಂದೂ ನಾಯಕ ಎಂದು ಒಪ್ಪುತ್ತೇವೆ ಎಂದು ಶಿವಸೇನಾ ಪಕ್ಷದ ಪ್ರಮುಖ ಆಂದೋಲದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ಬೆಂಗಳೂರು ಸಭಾಂಗಣದಲ್ಲಿ ಭಾನುವಾರ ಶಿವಸೇನಾ (ಏಕನಾಥ ಶಿಂಧೆ ಬಣ) ಕರ್ನಾಟಕ ವತಿಯಿಂದ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಪರಿವರ್ತನಾ ಪರ್ವ ಎಂಬ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಕಾರ್ಯ ತ್ವರಿತವಾಗಿ ಮಾಡದಿದ್ದರೆ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರದ ಮಹಾನ್ ಸಂತ ಕನೇರಿ ಶ್ರೀಗಳು ವಿಜಯಪುರ ಪ್ರವೇಶಿಸದಂತೆ ನಿಷೇಧ ಹೇರುವಂತೆ ಮಾಡಿದ್ದಾರೆ ಎಂದು ಸಚಿವ ಪಾಟೀಲರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಶಿವಸೇನೆ ಪಕ್ಷವು ಹಿಂದುತ್ವಕ್ಕಾಗಿ ರಾಜಕಾರಣ ಮಾಡುತ್ತೇ ಹೊರತು, ರಾಜಕಾರಣಕ್ಕಾಗಿ ಹಿಂದುತ್ವ ಮಾಡುವುದಿಲ್ಲ. ಬಹಿರಂಗವಾಗಿ ಮುಸ್ಲಿಮರನ್ನು ತೆಗಳಿ ಹಿಂಬಾಗಿಲಿನಿಂದ ಮುಸ್ಲಿಮರ ಜೊತೆ ವ್ಯವಹಾರ ಮಾಡುವ ಅನೇಕ ನಾಯಕರಿದ್ದಾರೆ. ಆದರೆ ನಾವು ಹಾಗಲ್ಲ, ನಾವು ರಾಜಕಾರಣ ಮಾಡುವುದೇ ಹಿಂದುತ್ವಕ್ಕಾಗಿ ಎಂದರು.
ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಪಕ್ಷದ ಧ್ವಜ ಹಾಗೂ ಆದೇಶ ಪ್ರತಿಯನ್ನು ನೀಡಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಶಿವಸೇನೆ ಪಕ್ಷದ ಪ್ರಮುಖರಾದ ಗಂಗಾಧರ ಕುಲಕರ್ಣಿ, ಅಮರನಾಥ್, ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಲಭೀಮ ಸಾರಥಿ, ಕ್ಷತ್ರಿ, ಪರಶುರಾಮ ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.