ADVERTISEMENT

ವಿಜಯಪುರ | ಕನೇರಿ ಶ್ರೀಗೆ ನಿರ್ಬಂಧ: ಕಾಂಗ್ರೆಸ್‌ ಸಂಚು ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:09 IST
Last Updated 17 ಅಕ್ಟೋಬರ್ 2025, 6:09 IST
<div class="paragraphs"><p>ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ವಿಜಯಪುರ ನಗರದಲ್ಲಿ ಗುರುವಾರ ಬಸವಾನುಯಾಯಿಗಳು ಪ್ರತಿಭಟನೆ ನಡೆಸಿದರು </p></div>

ಲಿಂಗಾಯತ ಸ್ವಾಮೀಜಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ವಿಜಯಪುರ ನಗರದಲ್ಲಿ ಗುರುವಾರ ಬಸವಾನುಯಾಯಿಗಳು ಪ್ರತಿಭಟನೆ ನಡೆಸಿದರು

   

ಪ್ರಜಾವಾಣಿ ಚಿತ್ರ

ವಿಜಯಪುರ: ಕಾಂಗ್ರೆಸ್ ಪಕ್ಷದ ಒಳಸಂಚು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕಿನಿಂದ ಕನೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಆರೋಪಿಸಿದರು.

ADVERTISEMENT

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವರು ಹೇಳಿದ ಮಾತ್ರಕ್ಕೆ ಜಿಲ್ಲಾಧಿಕಾರಿಗಳು ಕನೇರಿ ಶ್ರೀಗಳ ಪ್ರವೇಶ ನಿರ್ಬಂಧಿಸಿರುವುದು ಸರಿಯಲ್ಲ, ಕೂಡಲೇ ಜಿಲ್ಲಾಧಿಕಾರಿಗಳು ಈ ಆದೇಶವನ್ನು ವಾಪಾಸ್‌ ಪಡೆಯಬೇಕು, ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ಈ ರೀತಿಯ ಆದೇಶ ಹೊರಡಿಸಿರುವುದು ಸರಿಯಲ್ಲ. ಈ ಆದೇಶ ವಾಪಾಸ್‌ ಪಡೆಯದೇ ಹೋದರೆ ಬೀದಿಗಿಳಿದು ಉಗ್ರಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನೇರಿ ಶ್ರೀಗಳು ವಿಜಯಪುರ ಜಿಲ್ಲೆಯವರು, ಮಹಾರಾಷ್ಟ್ರದಲ್ಲಿ ದೊಡ್ಡ ಮಠವನ್ನು ಮುನ್ನಡೆಸಿ ರೈತ ಸೇವೆ, ಅನೇಕ ಶಿಕ್ಷಣ ಸಂಸ್ಥೆಗಳನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಅವರ ಬಗ್ಗೆ ಹೆಮ್ಮೆ ಪಡಬೇಕು, ಕೋವಿಡ್ ಸಮಯದಲ್ಲಿ ಅವರು ಸಲ್ಲಿಸಿದ ಸೇವೆ ಅದ್ಭುತ ಎಂದರು.

ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಸಂತೋಷ ಕುರದಡ್ಡಿ, ಭೀಮನಗೌಡ ಬಿರಾದಾರ, ವಿನಾಯಕ ಮಮದಾಪೂರ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‌ಖಂಡನೀಯ:

ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧಿಸಿರುವ ಕ್ರಮ ಖಂಡನೀಯ. ಸಂತರನ್ನು ಮುಟ್ಟಿದವರು ಯಾರು ಉಳಿದಿಲ್ಲ, ಜನಕಳಕಳಿಯ ಮತ್ತು ಸಮಾಜಮುಖಿ ಸಂತರನ್ನು ಅಡ್ಡಿಪಡಿಸಿ, ಕಾಂಗ್ರೆಸ್ ಸರ್ಕಾರ ತನ್ನ ಸಂಕುಚಿತ ಮನಸ್ಸನ್ನು ಮತ್ತೊಮ್ಮೆ ಸಾಬೀತುಮಾಡಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಿಂದೂ ಧರ್ಮದ ಪರವಾಗಿ ಮಾತನಾಡುವುದು ಅಪರಾಧವೇ?  ರಾಜ್ಯ ಸರ್ಕಾರದ ಕೆಲವು ನೀತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯ ಹಂಚಿಕೊಂಡ ಮಾತ್ರಕ್ಕೆ ಶ್ರೀಗಳಿಗೆ ಜಿಲ್ಲೆಗೆ ಪ್ರವೇಶಸಿದಂತೆ ನಿರ್ಬಂಧ ಹೇರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಗಳಿಗೆ ದೊಡ್ಡ ಅಪಮಾನ ಮಾಡಿ, ಪ್ರಜಾಪ್ರಭುತ್ವ ತತ್ವಗಳಿಗೆ ವಿರೋಧವಾಗಿ ನಡೆದುಕೊಂಡಿದೆ ಎಂದು ಜಿಗಜಿಣಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಪೂರ್ವಾಶ್ರಮ ಭಯಾನಕವಾಗಿದೆ. ಕ್ರಿಮಿನಲ್‌ ಹಿನ್ನೆಲೆ ಇರುವ ಕಾವಿ ಪುಡಾರಿ ಸ್ವಾಮಿ. ಲಿಂಗಾಯತ ನಾಶಕ್ಕೆ ಆರ್‌ಎಸ್‌ಎಸ್‌ನಿಂದ ಸುಪಾರಿ ಪಡೆದು ಖರೀದಿಯಾಗಿರುವ ಸ್ವಾಮಿ
ಡಾ.ಜೆ.ಎಸ್‌.ಪಾಟೀಲ ಬಸವ ಚಿಂತಕ

ಕಾರಜೋಳ ಆಕ್ರೋಶ 

ಕನೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧಿಸಿರುವ ಕ್ರಮ ಖಂಡನೀಯ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ ಶ್ರೀಗಳ ಜಿಲ್ಲಾ ನಿಷೇಧ ಹೇರುವ ಮೂಲಕ ರಾಜ್ಯ ಸರ್ಕಾರ ತನ್ನ ಕುಟೀಲ ನೀತಿಯನ್ನು ಪ್ರಯೋಗಿಸಿದೆ. ಮುಖ್ಯಮಂತ್ರಿಗಳ ಕೃಪಾ ಘೋಷಿತ ಮಂಡಳಿ ಎಂಬ ಸತ್ಯವನ್ನು ಶ್ರೀಗಳು ಹೇಳಿದ್ದಾರೆ ಇದನ್ನು ಅರಗಿಸಿಕೊಳ್ಳಲಾಗದ ರಾಜ್ಯ ಸರ್ಕಾರ ಶ್ರೀಗಳ ಮೇಲೆ ಈ ರೀತಿ ನಿರ್ಬಂಧ ಆದೇಶ ಹೊರಡಿಸಿದೆ. ಆದರೆ ಶ್ರೀಗಳು ಇದರಿಂದ ಹೆದರುವುದಿಲ್ಲ ಶ್ರೀಗಳ ಜೊತೆ ನಾವೆಲ್ಲರೂ ಇದ್ದೇವೆ ಎಂದು ತಿಳಿಸಿದ್ದಾರೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಇಲ್ಲವಾದರೆ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.