ಇಂಡಿ: ತಾಲ್ಲೂಕಿನ ನಾದ (ಬಿಕೆ) ನಾದ (ಕೆಡಿ) ಗ್ರಾಮಗಳ ಮಧ್ಯದಲ್ಲಿ ಪಂಢರಪುರ-ಗಾಣಗಾಪುರ ಹೆದ್ದಾರಿಯ ಹಳ್ಳಕ್ಕೆ ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿರುವ ಲಕ್ಷಾಂತರ ರೂಪಾಯಿ ವೆಚ್ಚದ ಸೇತುವೆಯು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದ ಹದಗೆಟ್ಟಿದೆ.
ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ನಿಂತು, ಗುಂಡಿಗಳು ಬಿದ್ದಿವೆ. ಸೇತುವೆಗೆ ಹಾಕಿರುವ ಸ್ಲ್ಯಾಬ್‌ನ ಕಬ್ಬಿಣದ ರಾಡುಗಳು ಮೇಲೆದ್ದಿವೆ. ಮೊಣಕಾಲುದ್ದ ನೀರಿನಲ್ಲಿಯೇ ವಾಹನಗಳು ಸಂಚರಿಸಬೇಕು. ನೀರಿನಲ್ಲಿ ಎದ್ದಿರುವ ಕಬ್ಬಿಣದ ರಾಡುಗಳು ವಾಹನಗಳ ಚಾಲಕರಿಗೆ ಕಾಣುತ್ತಿಲ್ಲ. ಅವು ಟೈರಿಗೆ ಚುಚ್ಚುತ್ತಿವೆ. ಇದರಿಂದ ವಾಹನಗಳು ಪಂಚರ್ ಆಗುತ್ತಿವೆ.
‘ಸೇತುವೆ ನಿರ್ಮಾಣವಾದಾಗಿನಿಂದಲೂ ಮಳೆಯ ನೀರು ಸೇತುವೆಯ ಮೇಲೆ ನಿಲ್ಲುತ್ತವೆ. ಮಳೆಯಿಂದ ಸೇತುವೆಯ ಮೇಲೆ ಬೀಳುವ ನೀರು ಸರಾಗವಾಗಿ ಹೊರಗಡೆ ಹೋಗಲು ಸೇತುವೆಯ ಎರಡೂ ಬದಿಗೆ (ಹೋಲ್) ಸ್ಥಳಾವಕಾಶ ಮಾಡಲಾಗಿದೆ. ಆದರೆ, ನೀರು ಹೋಗುವ ಆ ಸ್ಥಳ (ಹೋಲ್) ಕೇವಲ ಮಣ್ಣಿನಿಂದ ಮುಚ್ಚಿಕೊಂಡಿವೆ. ಆ ಮುಚ್ಚಿರುವ ಹೋಲ್‌ಗನ್ನು ತೆರವು ಮಾಡುವ ಕಾರ್ಯ ಕೂಡಾ ನಡೆಯುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ಸಲ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ. ಪತ್ರಿಕೆಗಳು ಈ ಬಗ್ಗೆ ಸಾಕಷ್ಟು ಸಲ ಗಮನ ಹರಿಸಿವೆ. ಆದರೂ ಕೂಡಾ ಇಲಾಖೆಯ ಅಧಿಕಾರಿಗಳು ಮಾತ್ರ ಈ ಬಗ್ಗೆ ನಿರ್ಲಕ್ಷ ತೋರುತ್ತಿದ್ದಾರೆ’ ಎಂದು ಸ್ಥಳೀಯರು ದೂರಿದರು.
‘ಅತೀ ಚಿಕ್ಕ ಕೆಲಸವಿದು. ಒಂದು ಅಥವಾ ಎರಡು ಕೆಲಸಗಾರರನ್ನು ಉಪಯೋಗಿಸಿ, ಸೇತುವೆಯ ಮೇಲೆ ಬಿದ್ದ ನೀರನ್ನು ಸರಾಗವಾಗಿ ಹೋಗಲು ಇದ್ದ ಮೋರಿಗಳನ್ನು ತೆರವುಗೊಳಿಸಿದರೆ ಸಾಕು ಸೇತುವೆಗೆ ಯಾವುದೇ ಅನಾಹುತವಾಗುವುದಿಲ್ಲ. ವಾಹನ ಚಾಲಕರಿಗೂ ಅನುಕೂಲವಾಗುತ್ತದೆ. ಆದರೆ, ಇಷ್ಟೊಂದು ಚಿಕ್ಕ ಕೆಲಸ ಮಾಡದ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ ಲಕ್ಷಾಂತರ ರೂಪಾಯಿ ವೆಚ್ಚದ ಈ ಸೇತುವೆ ನೀರಿನಿಂದ ನೆನೆದು ಬೀಳುವ ಸ್ಥಿತಿಗೆ ತಲುಪಿದೆ’ ಎಂದು ಆರೋಪಿಸಿದರು.
ಪ್ರಸಕ್ತ ವರ್ಷ ಮೇ ಕೊನೆಯ ವಾರದಲ್ಲಿಯೇ ಈ ಭಾಗದಲ್ಲಿ ಮಳೆಯಾಗುತ್ತಿದೆ. ಈ ಸೇತುವೆ ಮೇಲೆ ಮೊಣಕಾಲುದ್ದ ನೀರು ನಿಂತಿದೆ. ಇದೇ ನೀರಿನಲ್ಲಿಯೇ ಪ್ರತಿ ದಿನ ನೂರಾರು ವಾಹನಗಳು ಸಂಚರಿಸುತ್ತಿವೆ. ಪ್ರತಿ ದಿನ ಹತ್ತಾರು ವಾಹನಗಳು ನೀರಿನಲ್ಲಿ ತೆರೆದುಕೊಂಡಿರುವ ಕಬ್ಬಿಣದ ರಾಡಿನಿಂದ ಪಂಚರ್ ಆಗುತ್ತಿವೆ. ಪಂಚರ್ ಆಗಿರುವ ವಾಹನಗಳ ಮಾಲೀಕರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ತಮ್ಮ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
‘ಸೇತುವೆ ನಿರ್ಮಿಸಿದ ಸಂದರ್ಭದಲ್ಲಿ ಭಾರವಾದ ವಾಹನಗಳು ಚಲಿಸುತ್ತಿರಲಿಲ್ಲ. ಇತ್ತೀಚೆಗೆ ಭಾರವಾದ ವಾಹನಗಳು ಚಲಿಸುತ್ತಿರುವುದರಿಂದ ರಾಡುಗಳು ತೆರೆದುಕೊಂಡಿವೆ. ಪ್ರತೀ ವರ್ಷ ಮೇಲೆದ್ದಿರುವ ರಾಡುಗಳು ಕಟ್ ಮಾಡಿ ತೆಗೆದು ರಿಪೇರಿ ಮಾಡಿ, ನೀರು ಹೊರಹೋಗುವ ಹೋಲ್‌ಗಳನ್ನು ತೆರವು ಮಾಡಿದ್ದೇವೆ. ಮತ್ತೇ ಹಾಗೇ ಆಗುತ್ತಿದೆ. ಶೀಘ್ರ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ ಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪಂಢರಪುರ-ಗಾಣಗಾಪುರ ಹೆದ್ದಾರಿ ಮಂಜೂರಾತಿ ಸಿಕ್ಕಿದೆ. ಅದು ಪ್ರಾರಂಭಿಸುವ ಸಂದರ್ಭದಲ್ಲಿ ಸೇತುವೆ ದುರಸ್ತಿಗೆ ಶಾಶ್ವತ ರಿಪೇರಿ ಮಾಡುತ್ತೇವೆ.– ದಯಾನಂದ, ಮಠ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೋಪಯೋಗಿ ಇಲಾಖೆ ಇಂಡಿ
ಇಂಡಿ ತಾಲ್ಲೂಕಿನ ನಾದ ಗ್ರಾಮದ ಹಳ್ಳಕ್ಕೆ ನಿರ್ಮಿಸಿದ ಸೇತುವೆ ಮೇಲೆ ನೀರು ನಿಂತು ಸೇತುವೆ ಹಾಳಾಗುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡಾ ಯಾವದೇ ಪರಿಹಾರ ಸಿಕ್ಕಿಲ್ಲ.– ಮುರಿಗೆಪ್ಪ ಆಳೂರ, ಬೈಕ್ ಸವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.